ಆರ್ಟಿಕಲ್ 15: ಜಾತಿ ವಿರೋಧಿ ಚಳವಳಿಯ ಅಪವ್ಯಾಖ್ಯಾನ

Update: 2019-07-06 15:28 GMT

ಆರ್ಟಿಕಲ್ 15 ಸಿನೆಮಾದ ಆರಂಭದ ದೃಶ್ಯವೇ ನಿರ್ದೇಶಕ ಅನುಭವ್ ಸಿನ್ಹಾನ ಒಟ್ಟಾರೆ ಗ್ರಹಿಕೆಯನ್ನು ತೋರಿಸುತ್ತದೆ. ಬ್ರಾಹ್ಮಣ ಜಾತಿಯ ಆಯಾನ್ ರಂಜನ್ ಐಪಿಎಸ್ ತರಬೇತಿ ಪಡೆದು ಉತ್ತರ ಪ್ರದೇಶದ ಲಾಲ್‌ಗಾವ್ ಪ್ರಾಂತ್ಯಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತನಾಗಿ ನೇಮಕಗೊಂಡಿರುತ್ತಾನೆ.

ಲಾಲ್‌ಗಾವ್ ಪ್ರಾಂತ್ಯದ ಕುಗ್ರಾಮದಲ್ಲಿ ಸುರಿವ ಮಳೆಯಲ್ಲಿ ಒಂದೆಡೆ ದಲಿತ ಸಮುದಾಯ ಹೋರಾಟದ ಹಾಡನ್ನು ಹಾಡುತ್ತಿದ್ದರೆ ಮತ್ತೊಂದೆಡೆ ನೇರವಾಗಿ ದಿಲ್ಲಿಯಿಂದ ಅಧಿಕಾರ ವಹಿಸಿಕೊಳ್ಳಲು ಈ ಕುಗ್ರಾಮಕ್ಕೆ ಬರುತ್ತಿರುವ ಆಯಾನ್ ಕಾರಿನಲ್ಲಿ ಬಾಬ್ ಡೈಲನ್‌ನ ಪಾಪ್ ಹಾಡನ್ನು ಕೇಳುತ್ತ ಈ ಕುಗ್ರಾಮದ ಸೌಂದರ್ಯಕ್ಕೆ ಮಾರು ಹೋಗಿರುತ್ತಾನೆ. ಈ ಮಧ್ಯೆ ದಿಲ್ಲಿಯಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ತನ್ನ ಹೆಂಡತಿಗೆ ಥ್ರಿಲ್‌ಗೊಂಡ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸುತ್ತಿರುತ್ತಾನೆ. ಈ ದೃಶ್ಯದ ಮೂಲಕ ನಿರ್ದೇಶಕ ಅನುಭವ್ ಸಿನ್ಹಾ ಅವರು ಭಾರತದ ಗ್ರಾಮ ವರ್ಸಸ್ ನಗರದ ಪರಿಕಲ್ಪನೆಯಲ್ಲಿ ಮೇಲ್ಜಾತಿ ವರ್ಸಸ್ ಕೆಳಜಾತಿಯ ಭಾರತವನ್ನು ಹುಡುಕಲು ಹೊರಟಿದ್ದಾರೆನ್ನುವುದು ಸ್ಪಷ್ಟವಾಗುತ್ತದೆ ಮತ್ತು ಈ ಸಿನೆಮಾ ಮುಂದುವರಿದಂತೆ ನಿರ್ದೇಶಕ ನಗರದಲ್ಲಿ ಜಾತಿ ಪದ್ಧತಿಯೇ ಇಲ್ಲ, ಗ್ರಾಮಗಳಲ್ಲಿ ಜಾತಿ ಅಸಮಾನತೆ ತುಂಬಿ ತುಳುಕುತ್ತಿದೆ ಎನ್ನುವ ತನ್ನ ತಿಳುವಳಿಕೆಯನ್ನು ಖಚಿತವಾಗಿ ನಂಬಿರುವುದು ಸಹ ಪ್ರೇಕ್ಷಕನಿಗೆ ಅರಿವಾಗುತ್ತದೆ. ಗ್ರಾಮದ ಈ ಜಾತಿ ಪದ್ಧತಿಯ ಅನುಭವಕ್ಕಾಗಿಯೇ ಬ್ರಾಹ್ಮಣ ಜಾತಿಯ ಆಯಾನ್ ನಗರದಿಂದ ಬಂದಿದ್ದಾನೆ ಎನ್ನುವುದು ಪ್ರತಿ ಪ್ರೇಮ್‌ನಲ್ಲಿ ಗೋಚರವಾಗುತ್ತದೆ. ಜಾತಿ ಪದ್ಧತಿಯ ಅನಾವರಣ ಮಾಡುವ ಈ ಸಿನೆಮಾದ ಕತೆಗೆ ಅದರ ಕುರಿತಾದ ನಿರ್ದೇಶಕನ ಈ ಮುಗ್ಧ (ಅಜ್ಞಾನ) ಗ್ರಹಿಕೆ ಮತ್ತು ಸಂಬಂಧವಿಲ್ಲದ ಚಿತ್ರಕತೆ (antithesis) ಆಗಿಬಿಡುತ್ತದೆ.

ಅಲ್ಲಿಗೆ ಗಣೇಶನ ಮಾಡಲು ಹೋಗಿ ಮತ್ತೇನೊ ಮಾಡಿಬಿಡುತ್ತಾರೆ ಅನುಭವ ಸಿನ್ಹಾ ಈ ನಡುವೆ ಇಡಿ ಸಿನೆಮಾದಲ್ಲಿ ಪ್ರೇಕ್ಷಕರಿಂದ ಬರಪೂರ ಚಪ್ಪಾಳೆ, ವಿಶಲ್‌ಗಳಿಸಿದ ದೃಶ್ಯ ಬರುತ್ತದೆ. ಅಲ್ಲಿ ಪೊಲೀಸ್ ಆಯುಕ್ತ ಆಯಾನ್ ತನ್ನ ಪೊಲೀಸ್ ಠಾಣೆಯ ಪ್ರಾಂಗಣದಲ್ಲಿ ನಿಂತುಕೊಂಡು ಹೆಚ್ಚೂ ಕಡಿಮೆ ಅ ಲಾಲ್ಗಾವ್ ಪ್ರಾಂತದವರಾದ ತನ್ನ ಸಹೋದ್ಯೋಗಿಗಳ ಜಾತಿಯನ್ನು ವಿಚಾರಿಸುತ್ತಾನೆ. ಒಬ್ಬ ಪೊಲೀಸ್ ಠಾಕೂರ್ ಎಂದರೆ ಮತ್ತೊಬ್ಬ ಜಾಟವ್, ಇನ್ನೊಬ್ಬ ಜಾಟ್, ಇನ್ನೊಬ್ಬ ರಜಪೂತ್, ಕಾಯಸ್ಥ, ಮಗದೊಬ್ಬ ತಾನು ಚಮ್ಮಾರ ಎಂದು ಹೇಳುತ್ತಾರೆ. ಪಾಪ ನಗರ ಶಿಶುವಾದ ಆಯಾನ್‌ಗೆ ಗೊಂದಲ. ಏಕೆಂದರೆ ಆತ ತಾನು ಹುಟ್ಟಿ ಬೆಳೆದ ನಗರದಲ್ಲಿ ಈ ಜಾತಿಗಳ ಹೆಸರನ್ನೇ ಕೇಳಿರುವುದಿಲ್ಲ. (ಅಲ್ಲದೆ ನಿರ್ದೇಶಕರು ಅನುಸಾರ ನಗರಗಳಲ್ಲಿ ಜಾತಿಯೇ ಇಲ್ಲ) ಪಾಸಿ ಮತ್ತು ಚಮ್ಮಾರ್ ಒಂದೇ ಜಾತಿಯೇ ಎಂದು ಕೇಳುತ್ತಾನೆ. ಆಗ ಸಬ್ ಇನ್‌ಸ್ಪೆಕ್ಟರ್ ಆಗಿರುವ ಜಾಟವ್ ಅವರು ‘ಇಲ್ಲ ನಾವು ಚಮ್ಮಾರ್ ಜಾತಿಯವರು ಪಾಸಿಗಳಿಗಿಂತ ಮೇಲ್ಜಾತಿಯವರು, ಅವರ ಮನೆಯಲ್ಲಿ ಆಹಾರವನ್ನು ಸಹ ಸೇವಿಸುವುದಿಲ್ಲ ಎಂದು ಹೇಳುತ್ತಾರೆ. ಈ ಮೂಲಕ ಜಾತಿ ಪದ್ಧತಿಯೊಳಗಿನ ಅಸಮಾನತೆ ಮತ್ತು ಮೇಲುಕೀಳನ್ನು ವಿವರಿಸಲು ನಿರ್ದೇಶಕ ಅದರ ಕಾರಣಕರ್ತರಾದ ಬ್ರಾಹ್ಮಣ, ಠಾಕೂರ್‌ದಂತಹ ಶೋಷಕ ಜಾತಿಗಳನ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ ಮೇಲಿನಂತೆ ಶೋಷಿತ ದಲಿತ ಸಮಾಜದೊಳಗಿನ ಶ್ರೇಣೀಕರಣವನ್ನು ಉದಾಹರಿಸಿ ತಾನು ಜಾತಿ ಸಿಕ್ಕುಗಳ ಹೊಸ ಆವಿಷ್ಕಾರ ಕಂಡುಹಿಡಿದೆ ಎಂಬಂತೆ ಬೀಗುತ್ತಾನೆ.

ಇಂತಹ ಟೊಳ್ಳು ಆಶಯವನ್ನಿಟ್ಟುಕೊಂಡು ‘ಆರ್ಟಿಕಲ್ 15’ ಸಿನೆಮಾದಲ್ಲಿ ಇಂಡಿಯಾದ ಸಂಕೀರ್ಣ ಜಾತಿ ಪದ್ಧತಿಯನ್ನು ವಿವರಿಸಿದ್ದಾನೆ ಅಂದರೆ ನಮಗೆ ಆ ನಿರ್ದೇಶಕನ ಅರಿವಿನ ಕುರಿತಾಗಿ ಅನುಮಾನ ಮೂಡುತ್ತದೆ. ಇರಲಿ. ವಿದೇಶದಿಂದ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಮರಳಿರುವ ಬ್ರಾಹ್ಮಣ ಜಾತಿಯ ಆಯಾನ್‌ಗೆ ಇಲ್ಲಿನ ಜಾತಿ ಪದ್ಧತಿಯ ಕುರಿತು ಸಣ್ಣ ಮಟ್ಟದ ತಿಳುವಳಿಕೆ ಇರುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಸಹ ನಾವು ಕೇಳುವುದಿಲ್ಲ. ಆತ ತನ್ನ ಐಪಿಎಸ್ ಪರೀಕ್ಷೆಯಲ್ಲಿ ಜಾತಿ ಪದ್ಧತಿ ಎಂದರೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿಲ್ಲವೇ ಎಂದೂ ನಾವು ಕೇಳುವುದಿಲ್ಲ. ಆದರೆ ಈ ಲಾಲ್ಗವ್ ಕುಗ್ರಾಮಕ್ಕೆ ಬಂದು ಜಾತಿ ಭೀಕರತೆಯನ್ನು ಪ್ರತ್ಯಕ್ಷವಾಗಿ ಕಂಡ ನಂತರವೂ ದಿಲ್ಲಿಯಲ್ಲಿರುವ ತನ್ನ ಹೆಂಡತಿಗೆ ನಾನು ಇಲ್ಲಿನ ಈ ಜಾತಿ ಸಿಕ್ಕುಗಳನ್ನು ಬಿಡಿಸುತ್ತೇನೆ (unmess the mess) ಎಂದು ಮೆಸೇಜ್ ಮಾಡುತ್ತಾನೆ. ಅಂದರೆ ಆಯಾನ್ ಒಬ್ಬ ವ್ಯಕ್ತಿಯಾಗಿ, ಭಾರತೀಯನಾಗಿ, ಪೊಲೀಸ್ ಆಯುಕ್ತನಾಗಿ ಇಲ್ಲಿನ ಜಾತಿ ಪದ್ಧತಿಯ ಕರಾಳತೆಯನ್ನು ತನ್ನ ಬ್ರಾಹ್ಮಣ ಉದಾರವಾದಿ ದೃಷ್ಟಿಕೋನದ ಮೂಲಕ ಗ್ರಹಿಸಿದ್ದಾನೆ ಎಂಬುದು ಮನದಟ್ಟಾಗುತ್ತದೆ.

ಇಡೀ ಸಿನೆಮಾದ ದೊಡ್ಡ ಬಿಕ್ಕಟ್ಟೆಂದರೆ ಇಲ್ಲಿ ಜಾತಿಪದ್ಧತಿಯ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಬ್ರಾಹ್ಮಣ್ಯದ ದೃಷ್ಟಿಕೋನದಲ್ಲಿ ಕಂಡುಕೊಳ್ಳುತ್ತಾ ಆ ಮೂಲಕವೆ ಅದಕ್ಕೆ ಪರಿಹಾರವನ್ನು ಹುಡುಕುತ್ತೇನೆ ಎಂದು ಹೇಳುವ ನಿರ್ದೇಶಕ ಅನುಭವ್ ಸಿನ್ಹಾ ಅವರು ಇದೇ ಕಾರಣಕ್ಕಾಗಿಯೇ ಬ್ರಾಹ್ಮಣ ಜಾತಿಯವ ನನ್ನ ರಕ್ಷಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ನೀವ್ಯಾಕೆ ಬ್ರಾಹ್ಮಣರು ಮಾತ್ರ ರಕ್ಷಕರು ಎನ್ನುವ ಸಿಂಡ್ರೋಮ್‌ಗೆ ಶರಣಾಗಿದ್ದೀರಿ ಎಂಬ ಪ್ರಶ್ನೆಗೆ ನಿರ್ದೇಶಕ ಅನುಭವ್ ಸಿನ್ಹಾ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡ ಬ್ರಾಹ್ಮಣ ಸಮುದಾಯದಿಂದ ಬಂದ ವ್ಯಕ್ತಿಯ ಮೂಲಕವೇ ಈ ವಿಶೇಷ ಸವಲತ್ತು ಪಡೆದುಕೊಂಡವರ ವಿರುದ್ಧ ಹೋರಾಟ ರೂಪಿಸುವ ಕತೆ ಬರೆದಿದ್ದೇನೆ ಎಂದು ಹೇಳುತ್ತಾನೆ. ತಮಾಷ ಎಂದರೆ ಇಲ್ಲಿ ರಕ್ಷಕ ಆಯಾನ್ ತನ್ನದೇ ಬ್ರಾಹ್ಮಣ ಜಾತಿ ಸಮುದಾಯದ ವಿರುದ್ಧ್ದ ಒಂದು ಸೆಕೆಂಡಿನ ಹೋರಾಟವನ್ನು ಸಹ ಮಾಡುವುದಿಲ್ಲ. 

ಆಯಾನ್ ಜಾತಿ ವಿರೋಧಿ ಹೋರಾಟದ ಬದಲಿಗೆ ಉತ್ತರ ಪ್ರದೇಶದ ಕಗ್ಗಂಟಾದ ಸಮಾಜೋ-ರಾಜಕೀಯ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ. ಕೊನೆಗೂ ಆರ್ಟಿಕಲ್ 15 ಸಿನೆಮಾ ದಶಕದ ಹಿಂದೆ ಬಿಡುಗಡೆಯಾದ ಗಂಗಾಜಲ್ ಸಿನೆಮಾದ ಮುಂದುವರಿದ ಅವತರಣಿಕೆಯಾಗಿದೆ. ಈ ಸಿನೆಮಾದ ದೊಡ್ಡ ದೋಷವೆಂದರೆ ಜಾತಿಯತೆಯನ್ನು, ಅಸ್ಪಶ್ಯತೆಯನ್ನು ಗಾಂಧಿಯನ್ ಉದಾರವಾದಿ ನೆಲೆಯಲ್ಲಿ ಅರ್ಥೈಸಿರುವುದು. ಒಂದು ದೃಶ್ಯದಲ್ಲಿ ರಕ್ಷಕ ಆಯಾನ್ ತನ್ನ ಪೊಲೀಸ್ ಠಾಣೆಯ ಮುಂದೆ ಸುರಿಯಲಾದ ಕಸ, ಕೊಳಚೆಯ ಮೇಲೆ ಅಡ್ಡಾಡುತ್ತಾನೆ. ಕ್ಲೈಮಾಕ್ಸ್‌ನಲ್ಲಿ ಹಂದಿಗಳನ್ನು ದಾಟಿಸುವ ಕೊಚ್ಚೆಗೊಂಡಿಯಲ್ಲಿ ತಾನೇ ಸ್ವತಃ ಮುನ್ನುಗ್ಗುತ್ತಾನೆ. ಈ ವರ್ತನೆಗಳೇ ನಗರ ಶಿಶು ಅಯಾನ್‌ಗೆ ಜಾತಿ ವಿನಾಶದ ಮಾದರಿಗಳು. ಅಂದರೆ ನೋಡಿ ಬ್ರಾಹ್ಮಣನಾದ ಪೊಲೀಸ್ ಆಯುಕ್ತನೇ ಕೊಚ್ಚೆಯಲ್ಲಿ ಇಳಿಯಲು ಮುಂದಾಗಿದ್ದಾನೆ, ಇನ್ನು ನಿಮಗೇನು ದಾಡಿ ಎಂದು ನಿರ್ದೇಶಕ ಹಿಂದುಳಿದ ಜಾತಿಗಳಿಗೆ ಸೂಚಿಸುತ್ತಿದ್ದಾನೆ. ಇದು ಬ್ರಾಹ್ಮಣ್ಯದ ಮನಸ್ಥಿತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅನುಭವ್ ಸಿನ್ಹಾ ಅವರು ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯನ್ನು ಓದಿಕೊಂಡಂತಿಲ್ಲ ಅಥವಾ ಓದಿದ್ದರೂ ನಿಜದ ಅರ್ಥದಲ್ಲಿ ಗ್ರಹಿಸಿಲ್ಲ. ಹೀಗಾಗಿಯೇ ಅವರು ಈ ಜಾತಿ ಪದ್ಧತಿ ಎನ್ನುವುದು ಅನ್ಯಗ್ರಹದಿಂದ ಹೊರಹೊಮ್ಮಿ ಭಾರತದ ಗ್ರಾಮಗಳಲ್ಲಿ ಮಾತ್ರ ತಟ್ಟನೆ ಉದುರಿದಂತೆ ಭಾವಿಸಿದ್ದಾರೆ. ಹೀಗಾಗಿಯೇ ಒಬ್ಬ ಬ್ರಾಹ್ಮಣ ರಕ್ಷಕನನ್ನು ಸೃಷ್ಟಿಸಿದ್ದಾರೆ. ಆದರೆ ಹಿಂದೂ ಜಾತಿ ಪದ್ಧತಿ, ಅಲ್ಲಿನ ವರ್ಣಾಶ್ರಮ ಮತ್ತು ಶ್ರೇಣೀಕರಣ ಇದರ ಆಳ ಅಗಲವನ್ನು ಅಧ್ಯಯನ ಮಾಡದೆ ಆರ್ಟಿಕಲ್ 15 ರೀತಿಯ ಸಿನೆಮಾ ಮಾಡುವುದು ಕೊನೆಗೂ ಜಾತಿ ವಿರೋಧಿ ಚಳವಳಿಯನ್ನು ಅಪವ್ಯಾಖ್ಯಾನ ಮಾಡಿದಂತಾಗುತ್ತದೆ. ನಾಗ್ರಾಜ್ ಮಂಜುಳೆ, ಪ. ರಂಜಿತ್ ಸಿನೆಮಾಗಳು ಜಾತಿ ವಿನಾಶ ಚಳವಳಿಯ ಮುಂದುವರಿದ ಕಥನಗಳು. ಅಲ್ಲಿ ನೈಜತೆ ಇದೆ. ಅಲ್ಲಿ ಯಾರೂ ರಕ್ಷಕರು ಇಲ್ಲ. ಬ್ರಾಹ್ಮಣ್ಯದ ದೃಷ್ಟಿಕೋನವಿಲ್ಲ. ಮುಖ್ಯವಾಗಿ ಅಲ್ಲಿನ ಪಾತ್ರಗಳು ಮುಖ್ಯ ಕಥಾನಕದಿಂದ ಪಕ್ಕಕ್ಕೆ ಸರಿದು ನಿಲ್ಲುವುದಿಲ್ಲ. ಪ್ರೇಕ್ಷಕನನ್ನೂ ಸಹ ಸಿನೆಮಾದ ಕಥನದೊಂದಿಗೆ ಹೆಣೆಯುತ್ತವೆ.

ಅನುಭವ್ ಸಿನ್ಹಾ ಅವರ ಆರ್ಟಿಕಲ್ 15 ಸಿನೆಮಾದ ದೊಡ್ಡ ದೌರ್ಬಲ್ಯವೆಂದರೆ ಎಲ್ಲರಿಗೂ ಈ ಜಾತಿ ಅಸಮಾನತೆಯ ವ್ಯವಸ್ಥೆ ಒಂದು ಹೊರಲೋಕ. ಪ್ರೇಕ್ಷಕರ ಜೊತೆಗೆ ನಟ, ನಟಿಯರು ಸಹ ಸೇರಿಕೊಂಡು ಅದರ ವಿಮರ್ಶೆಗೆ ತೊಡಗುತ್ತಾರೆ. ಪ. ರಂಜಿತ್‌ರ ‘ಕಾಲಾ’ ಸಿನೆಮಾದ ಪಾತ್ರಗಳ ಜೊತೆ ಆರ್ಟಿಕಲ್ 15 ಸಿನೆಮಾದ ಪಾತ್ರಗಳನ್ನು ಅಕ್ಕಪಕ್ಕ ಇಟ್ಟು ತುಲನಾತ್ಮಕವಾಗಿ ವಿಮರ್ಶಿಸಿ. ನಿಮಗೆ ಈ ಸಿನೆಮಾದ ಮಿತಿಗಳು ಮತ್ತು ಕೊರತೆಗಳು ಕಣ್ಣಿಗೆ ರಾಚುತ್ತವೆ. ಉದಾಹರಣೆಗೆ ಈ ‘ಆರ್ಟಿಕಲ್ 15’ ಸಿನೆಮಾ ದಲ್ಲಿ ದಲಿತ ಪೊಲೀಸ್ ಅಧಿಕಾರಿಯಾದ ಜಾಟವ್, ದಲಿತ ಮಹಿಳೆ ಗೌರ ಅವರ ಬಾಯಲ್ಲಿ ತಮ್ಮ ಸಮುದಾಯದ ಕುರಿತಾದ ಆಡುವ ಕೀಳರಿಮೆಯ ಮಾತುಗಳು ಕತೆಗೆ ಪೂರಕವಾಗಿ ಮೂಡಿ ಬಂದಿಲ್ಲ. ಬದಲಿಗೆ ಬ್ರಾಹ್ಮಣ ರಕ್ಷಕನಿಗೆ ಮೊರೆ ಇಡುವಂತೆ ಹೆಣೆಯಲಾಗಿದೆ. ಆದರೆ ‘ಕಾಲಾ’ ಸಿನೆಮಾದಲ್ಲಿ ಚಾರುಮತಿ ಮತ್ತು ಲೆನಿನ್ ಪಾತ್ರಗಳು ಸದಾ ಹೋರಾಟ ಮತ್ತು ವಿಮೋಚನೆಯ ದಿಟ್ಟ ದನಿಯಲ್ಲಿ ಮಾತನಾಡುತ್ತವೆ. ಈ ಸಿನೆಮಾದ ನಿಜದ ಆತ್ಮವಾಗಬಹುದಾಗಿದ್ದ ಭೀಮ್ ಆರ್ಮಿಯ ನಿಶಾದ್ ಬಾಯಲ್ಲಿ ಆಗ ಹರಿಜನ, ಈಗ ಬಹುಜನ ಆದರೆ ನಾವು ಜನರಾಗುವುದು ಯಾವಾಗ ಎಂದು ಹೇಳಿಸುತ್ತಾರೆ. ಗಾಂಧಿ ನೀಡಿದ ಹರಿಜನ ಪದ ಇಂದು ನಿಷಿದ್ಧ. ಆದರೆ ಬಹುಜನ ಒಂದು ದೊಡ್ಡ ರಾಜಕೀಯ ಚಳವಳಿ. ಇವೆರಡನ್ನು ಜೊತೆಗೆ ಒಂದೇ ತಕ್ಕಡಿಯಲ್ಲಿಟ್ಟು ಬಿಡುತ್ತಾರೆ. ಇದು ದುರಂತ. ಅಲ್ಲದೆ ನಿರ್ದೇಶಕರಿಗೆ ಈ ಬಿಎಸ್ಪಿ ಪಕ್ಷದ ಕುರಿತಾಗಿಯೇ ಅಸಹನೆ ಇದೆ. ಆ ಪಕ್ಷವನ್ನು ಒಂದು ಅವಕಾಶವಾದಿ ಸಂಘಟನೆ ಎಂಬಂತೆ ಬಿಂಬಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳ ಬಿಎಸ್ಪಿ ರಾಜಕಾರಣವನ್ನು ಕಂಡವರಿಗೆ ಈ ರೀತಿಯ ಸರಳೀಕರಣ ಉಂಟು ಮಾಡಬಹುದಾದ ಅನಾಹುತಗಳ ಕುರಿತು ಆತಂಕವಾಗುತ್ತದೆ.

ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ರಕ್ಷಕ ಆಯಾನ್ ಮತ್ತು ಆತನ ವಿಭಿನ್ನ ಜಾತಿಗಳ ಪೊಲೀಸ್ ಪಡೆ ಒಟ್ಟಿಗೆ ಕೂತು ಹಂಚಿಕೊಂಡು ರೋಟಿ ತಿನ್ನುತ್ತಾರೆ. ಅಂತೂ ಕಲೆತು ಉಣ್ಣುವ ಮೂಲಕ ನಿರ್ದೇಶಕ ಅನುಭವ್ ಸಿನ್ಹಾ ಜಾತಿ ತಾರತಮ್ಯವನ್ನು ಅಳಿಸಿದ್ದೇನೆ ಎನ್ನುವ ಸಂದೇಶ ಕೊಡುತ್ತಾರೆ. ಉಘೇ ಉಘೇ ಎನ್ನೋಣ ಬನ್ನಿ!!!

ಮರೆಯುವ ಮುನ್ನ

ಈ ಸಿನೆಮಾವನ್ನ ವಿರೋಧಿಸಿ ಬ್ರಾಹ್ಮಣ ಸಮುದಾಯದವರು ಹಿಂಸಾತ್ಮಕ ಹೋರಾಟ ಮಾಡುತ್ತಿದ್ದಾರೆ. ಆದರೆ ಅವರು ಯಾಕೆ ವಿರೋಧಿಸುತ್ತಿದ್ದಾರೆ? ಬ್ರಾಹ್ಮಣರ ಈ ವಿರೋಧಕ್ಕೆ ಪ್ರತಿಕ್ರಿಯಿಸುತ್ತಾ ನಿರ್ದೇಶಕ ಅನುಭವ್ ಸಿನ್ಹಾ ಅವರು ನನ್ನ ಸಿನೆಮಾದಲ್ಲಿ ಬ್ರಾಹ್ಮಣ ವಿರೋಧಿ ಅಂಶಗಳು ಒಂದೂ ಇಲ್ಲ, ಈ ಸಿನೆಮಾದಲ್ಲಿ ತೊಡಗಿಸಿಕೊಂಡಿರುವವರಲ್ಲಿ ಅನೇಕರು ಬ್ರಾಹ್ಮಣರಿದ್ದಾರೆ ಎಂದೆಲ್ಲಾ ಬರೆದುಕೊಂಡಿದ್ದಾರೆ.

ಇದೆ ಆರ್ಟಿಕಲ್ 15 ಸಿನೆಮಾದ antithesis

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News