ನಿವೃತ್ತ ಪೊಲೀಸ್ ಅಧಿಕಾರಿಗಳ ವಿಮೆ ಮೊತ್ತ 5 ಲಕ್ಷ ರೂ.ಗೆ ಏರಿಕೆಯಾಗಲಿ: ವೆಂಕಟರಾಮು

Update: 2019-07-06 17:14 GMT

ಬೆಂಗಳೂರು, ಜು.6: ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದವರಿಗೆ ನೀಡುವ ವಿಮೆ ಮೊತ್ತವನ್ನು 5 ಲಕ್ಷ ರೂ.ಗೆ ಏರಿಸಬೇಕೆಂದು ಬೆಂಗಳೂರು ನಗರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯು.ಟಿ.ವೆಂಕಟರಾಮು ಒತ್ತಾಯಿಸಿದರು.

ನಗರದ ಆಡುಗೋಡಿಯಲ್ಲಿರುವ ಮಂಗಳ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ನಗರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 5ನೆ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘ ಸ್ಥಾಪನೆಯಾಗಿ ಐದು ವರ್ಷವಾಗಿದ್ದು, 3,565 ಸದಸ್ಯರಿದ್ದಾರೆ. ಸದ್ಯ ಸಣ್ಣದೊಂದು ಕೊಠಡಿಯಲ್ಲಿ ಸಂಘದ ಕೆಲಸಗಳು ನಡೆಯುತ್ತಿವೆ. ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಘವು ಸ್ವಂತ ಜಾಗ ಹಾಗೂ ಕಟ್ಟಡವನ್ನು ಸರಕಾರ ಕಲ್ಪಿಸಿಕೊಡಬೇಕೆಂದು ತಿಳಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದವರಿಗೆ ನೀಡುವ ವಿಮೆ ಮೊತ್ತವನ್ನು 5 ಲಕ್ಷ ರೂ.ಗೆ ಏರಿಸಬೇಕು. ಅಂತ್ಯ ಸಂಸ್ಕಾರಕ್ಕೆ ನೀಡುತ್ತಿರುವ 5 ಸಾವಿರ ರೂ.ಯಾವುದಕ್ಕೂ ಸಾಲುತ್ತಿಲ್ಲ. ಆ ಮೊತ್ತವನ್ನು 20 ಸಾವಿರ ರೂ.ಗೆ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಸಂಘಗಳ ನಡುವೆ ಒಡಕು ಬೇಡ: ಸಭೆಯಲ್ಲಿದ್ದ ನಿವೃತ್ತ ಎಸಿಪಿ ಅಬ್ದುಲ್ ಅಝೀಂ ಮಾತನಾಡಿ, ಬೆಂಗಳೂರಿನಲ್ಲೇ ಎರಡು ಸಂಘಗಳಿದ್ದು, ಈ ರೀತಿಯ ಒಡಕು ಸರಿಯಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಒಂದೇ ಸಂಘದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಹೇಳಿದರು. ನಿವೃತ್ತ ಡಿಜಿಪಿ ಓಂ ಪ್ರಕಾಶ್ ಮಾತನಾಡಿ, ಸಂಘಕ್ಕೆ ಜಾಗ ಹಾಗೂ ಕಟ್ಟಡ ಒದಗಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ 80 ವರ್ಷ ದಾಟಿದ ನಿವೃತ್ತ ಪೊಲೀಸರನ್ನು ಹಾಗೂ ಎಸೆಸೆಲ್ಸಿ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ನಿವೃತ್ತ ಪೊಲೀಸರ ಮಕ್ಕಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News