ವಾಸ್ತವ ಮುಚ್ಚಿಡಲು ಕೆಂಪು ವಸ್ತ್ರವೇ ಬೇಕಾಗಿತ್ತಾ?

Update: 2019-07-06 18:36 GMT

ಚಾಲ್ತಿ ಖಾತೆಯ ಕೊರತೆಯಾಗಲೀ, ವಿತ್ತೀಯ ಕೊರತೆಯಾಗಲೀ ನಾಳಿನ ಕೂಳಿಗಾಗಿ ಕೈಚಾಚುವ ಬಡ ರೈತನ ಪಾಲಿಗೆ ಹೇಗೆ ಪ್ರಸ್ತುತವಾದೀತು ಅಲ್ಲವೇ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವಾಸ್ತವದ ಗ್ರಹಿಕೆ ಇದೆ. ಹಾಗಾಗಿಯೇ ತಮ್ಮ 127 ನಿಮಿಷದ ಹರಿಕಥೆಯಲ್ಲಿ 115 ನಿಮಿಷ ಕಳೆದ ಐದು ವರ್ಷಗಳ ಸಾಧನೆಯನ್ನು ಹೇಳಲು ಬಳಸಿದ್ದಾರೆ.

ಕೇಂದ್ರ ಸರಕಾರದ ವಿತ್ತ ಮಂತ್ರಿಗಳು ಪ್ರತಿವರ್ಷ ಮಂಡಿಸುವ ಬಜೆಟ್ ಎನ್ನುವ ಕಂತೆ ಈ ದೇಶದ ಜನರಲ್ಲಿ ಹುಟ್ಟಿಸುವ ನಿರೀಕ್ಷೆ, ಆತಂಕ ಮತ್ತು ಭರವಸೆ ಅಪಾರ. ಇದು ಸಹಜವೂ ಹೌದು. ವೇತನ ಪಡೆಯುವ ಮಧ್ಯಮ ವರ್ಗಗಳಿಗೆ ಆದಾಯ ತೆರಿಗೆ ವಿನಾಯಿತಿ, ರೈತರಿಗೆ ಕೃಷಿ ಬಂಡವಾಳ, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ, ಸಣ್ಣ ವ್ಯಾಪಾರಿಗಳಿಗೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ, ನಿರುದ್ಯೋಗಿಗಳಿಗೆ ಉದ್ಯೋಗದ ಹೊಸ ಜಗತ್ತು ಹೀಗೆ ಬಜೆಟ್ ಎಂದರೆ ನಿರೀಕ್ಷೆಯ ಬೆಟ್ಟವನ್ನೇ ಸೃಷ್ಟಿಸುವ ಕಸರತ್ತು ಎಂದು ಭಾವಿಸಲಾಗುತ್ತದೆ. ಈ ಬಜೆಟ್ ಎಂದರೇನು? ಆಡಳಿತಾರೂಢ ಸರಕಾರ ಮುಂದಿನ ಒಂದು ವರ್ಷದ ಅವಧಿಯಲ್ಲಿ ತನ್ನ ಆದಾಯ ಮತ್ತು ವೆಚ್ಚವನ್ನು ಹೇಗೆ ಸರಿದೂಗಿಸುತ್ತದೆ, ಹೇಗೆ ಬಳಸುತ್ತದೆ ಮತ್ತು ಹೆಚ್ಚಿನ ಆದಾಯ ಬಂದಲ್ಲಿ ಯಾವ ಕ್ಷೇತ್ರದಲ್ಲಿ ತೊಡಗಿಸಲಾಗುತ್ತದೆ, ಅಭಿವೃದ್ಧಿಯ ಕೊರತೆ ಎದುರಿಸುತ್ತಿರುವ ಕ್ಷೇತ್ರಗಳನ್ನು ಹೇಗೆ ಪ್ರಗತಿಯ ಮಾರ್ಗಕ್ಕೆ ತರುತ್ತದೆ ಮತ್ತು ದೇಶದ ಅರ್ಥವ್ಯವಸ್ಥೆಯನ್ನು ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನಲ್ಲಿ ಹೇಗೆ ಸುಸ್ಥಿರವಾಗಿ ಇರಿಸುತ್ತದೆ ಹೀಗೆ ಹಲವು ಆಯಾಮಗಳ ಗೋಜಲು ಈ ಬಜೆಟ್ ಎನ್ನುವ ಪ್ರಕ್ರಿಯೆ. ಇದರ ಕಂತೆಯನ್ನು ಸೂಟ್ ಕೇಸಿನಲ್ಲಿ ತಂದರೇನು, ನಾರುಮಡಿಯಲ್ಲಿ ಕಟ್ಟಿ ತಂದರೇನು? ನಮ್ಮ ಮಾಧ್ಯಮಗಳಲ್ಲಿ ತೋರಿದಂತೆ ಪ್ರಧಾನಮಂತ್ರಿ 86 ಚಪ್ಪಾಳೆ ಹೊಡೆದರೇನು ನೂರು ಬಾರಿ ಮೇಜು ಕುಟ್ಟಿದರೇನು? ಅಂತಿಮವಾಗಿ ಇದು ಬಾಧಿಸುವುದು ಈ ದೇಶದ ಜನಸಾಮಾನ್ಯರನ್ನು. ರಸ್ತೆಬದಿಯಲ್ಲಿ ತರಕಾರಿ ಮಾರುವವರ ಬಳಿ ಹೋಗಿ ಕೇಂದ್ರ ಬಜೆಟ್ ಬಗ್ಗೆ ನಿಮಗೇನನ್ನಿಸುತ್ತೆ ಎಂದು ಕೇಳಿದರೆ ಏನು ಹೇಳಿಯಾನು? ಅವನಿಗೆ ಇದರ ಗೊಡವೆಯೇ ಬೇಕಿರುವುದಿಲ್ಲ. ಕಟ್ಟಡ ಕಾರ್ಮಿಕನಿಗೆ, ಕೃಷಿ ಕಾರ್ಮಿಕನಿಗೆ, ಮೆಟ್ರೋ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ, ಗಾರ್ಮೆಂಟ್ ನೌಕರರಿಗೆ ಬಜೆಟ್ ಎನ್ನುವುದು ಮನರಂಜನೆಯ ಹೊರತು ಮತ್ತೇನೂ ಆಗಲು ಸಾಧ್ಯವಿಲ್ಲ.

ಆದರೆ ಈ ಎಲ್ಲ ಶ್ರಮಜೀವಿಗಳ ಬದುಕಿನಲ್ಲಿ ಪ್ರಭಾವ ಬೀರುವ ವಾರ್ಷಿಕ ಬಜೆಟ್ ಕುರಿತಂತೆ ಪಂಡಿತರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಪಂಡಿತೋತ್ತಮರ ಗಮನ ಇರುವುದು ಷೇರು ಮಾರುಕಟ್ಟೆ, ವಿದೇಶಿ ಬಂಡವಾಳ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಮೇಲೆ. ಚಾಲ್ತಿ ಖಾತೆಯ ಕೊರತೆಯಾಗಲೀ, ವಿತ್ತೀಯ ಕೊರತೆಯಾಗಲೀ ನಾಳಿನ ಕೂಳಿಗಾಗಿ ಕೈಚಾಚುವ ಬಡ ರೈತನ ಪಾಲಿಗೆ ಹೇಗೆ ಪ್ರಸ್ತುತವಾದೀತು ಅಲ್ಲವೇ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವಾಸ್ತವದ ಗ್ರಹಿಕೆ ಇದೆ. ಹಾಗಾಗಿಯೇ ತಮ್ಮ 127 ನಿಮಿಷದ ಹರಿಕಥೆಯಲ್ಲಿ 115 ನಿಮಿಷ ಕಳೆದ ಐದು ವರ್ಷಗಳ ಸಾಧನೆಯನ್ನು ಹೇಳಲು ಬಳಸಿದ್ದಾರೆ. ಉಳಿದಿದ್ದನ್ನು ನಿಮ್ಮ ಲ್ಯಾಪ್‌ಟಾಪ್ ಗಳಲ್ಲಿ ಓದಿಕೊಳ್ಳಿ ಎಂದು ಕೈತೊಳೆದುಕೊಂಡಿದ್ದಾರೆ. ಲಕ್ಷಾಂತರ ಕೋಟಿ ರೂ.ಗಳು ಭಾರತದ ಅರ್ಥವ್ಯವಸ್ಥೆಯಲ್ಲಿ ಹರಿದಾಡುತ್ತದೆ ಎಂದರೆ, ದುಡ್ಡಿಲ್ಲದವರು ಈ ಹಣವನ್ನು ಬಾಚಿಕೊಳ್ಳಬಹುದು ಎಂದೇನೂ ಭಾವಿಸಬೇಕಿಲ್ಲ ಅಲ್ಲವೇ? 2024ರ ವೇಳೆಗೆ ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುತ್ತದೆ ಎಂಬ ಭರವಸೆಯೊಂದಿಗೆ ಮೋದಿಯವರ ಎರಡನೇ ಪಾಳಿ ಆರಂಭವಾಗಿದೆ.

 ಇದರ ಅರ್ಥ ಏನು? ಭಾರತದಲ್ಲಿ ಜಾಗತಿಕ ಬಂಡವಾಳದ ಹರಿವು ಹೆಚ್ಚಾಗಲಿದೆ, ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ, ಭಾರತದ ಶ್ರಮಜೀವಿಗಳಿಗೆ ಉಸಿರಾಡಲು ಅವಕಾಶ ನೀಡುವ ಎಲ್ಲ ಸಾರ್ವಜನಿಕ ಔದ್ಯಮಿಕ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅನುಕೂಲ ಮಾಡಿಕೊಡುವ ಮೂಲಕ ನಮ್ಮ ದೇಶದ ಶ್ರಮಜೀವಿಗಳಿಗೆ ಹೊಸ ಲೋಕವೊಂದನ್ನು ತೋರಿಸಲು ವೇದಿಕೆ ಸಜ್ಜಾಗುತ್ತಿದೆ. ವಿಮೆ, ಸಾರಿಗೆ, ಚಿಲ್ಲರೆ ವ್ಯಾಪಾರ, ಬ್ಯಾಂಕಿಂಗ್ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹರಿದುಬರುತ್ತಿರುವಂತೆಯೇ ಇತ್ತ ಸಾರ್ವಜನಿಕ ಕ್ಷೇತ್ರಗಳಿಂದ ಸರಕಾರ ತಾನು ಹೂಡಿರುವ ಬಂಡವಾಳವನ್ನು ಹಿಂದೆಗೆಯಲು ಆರಂಭಿಸುತ್ತದೆ. 20 ಬ್ಯಾಂಕುಗಳ ಸ್ಥಾನದಲ್ಲಿ 8 ಇರುತ್ತವೆ. ವಿಮಾ ಕ್ಷೇತ್ರದಲ್ಲಿ ಬಹುಶಃ ಒಂದೇ ಸಂಸ್ಥೆ ಉಳಿಯುತ್ತದೆ. ಚಿಲ್ಲರೆ ವ್ಯಾಪಾರಿಗಳು ತಮ್ಮ ಬದುಕು ಕಟ್ಟಿಕೊಂಡಿದ್ದು ಸಾಕು, ಇನ್ನು ಪಿಂಚಣಿಯಲ್ಲಿ ಜೀವನ ಸವೆಸಲಿ ಎಂದು ನಿರ್ಧರಿಸಿರುವ ಕೇಂದ್ರ ಸರಕಾರ ಅವರಿಗೂ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಈ ಪಿಂಚಣಿ ಯೋಜನೆ ನಮಗೆ ನಾವೇ ಕಪಾಳಮೋಕ್ಷ ಮಾಡಿಕೊಂಡಂತೆ. ನಮ್ಮಲ್ಲಿರುವುದನ್ನು ಕಳೆದುಕೊಂಡು ಅಳಿದುಳಿದ ಆದಾಯದಲ್ಲಿ ಕೊಂಚ ಸರಕಾರಕ್ಕೆ ಸಲ್ಲಿಸಿ ಅದಕ್ಕೆ ಪ್ರತಿಯಾಗಿ ತಿಂಗಳಿಗಿಷ್ಟು ಪಿಂಚಣಿ ಪಡೆಯುವ ಪ್ರಕ್ರಿಯೆಗೆ ಆಡು ಮಾತಿನಲ್ಲಿ ‘‘ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು’’ ಎಂದು ಹೇಳಲಾಗುತ್ತದೆ. ಬ್ಯಾಂಕಿಂಗ್, ವಿಮೆ, ರೈಲ್ವೆ, ರಸ್ತೆ ಸಾರಿಗೆ, ವಿಮಾನ ಸಾರಿಗೆ, ಶಿಕ್ಷಣ, ಆರೋಗ್ಯ ಈ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ/ವಿದೇಶಿ ಬಂಡವಾಳ ಹೆಚ್ಚಾಗುತ್ತಾ ಹೋದಂತೆ ಶ್ರಮಿಕರಹಿತ ಅಭಿವೃದ್ಧಿಯ ವೇದಿಕೆ ಸೃಷ್ಟಿಯಾಗುತ್ತದೆ. ಒಮ್ಮಿಮ್ಮೆ ಕೇಂದ್ರ ವಿತ್ತ ಸಚಿವರು ಮಂಡಿಸುವ ಬಜೆಟ್ ರಸ್ತೆ ಅಗಲೀಕರಣ ಸಂದರ್ಭದ ಜೆಸಿಬಿಯಂತೆ ಕಾಣುತ್ತದೆ. ‘‘ನಾವು ಒಡೆದು ಹಾಕುತ್ತೇವೆ ಅಲ್ಲಿ ಹೋಗಿ ಪರಿಹಾರ ಪಡೆಯಿರಿ’’ ಎಂದು ಕಾಡುಹಂದಿಯಂತೆ ಮುನ್ನುಗ್ಗುವ ಜೆಸಿಬಿಗೆ ನಾವು ಈಗಾಗಲೇ ಶರಣಾಗಿಬಿಟ್ಟಿದ್ದೇವೆ. ದೇಶದ ಅಭಿವೃದ್ಧಿಗಾಗಿ ಇಷ್ಟೂ ಮಾಡದಿದ್ರೆ ಹೇಗ್ರೀ ಎನ್ನುವ ಔಪಚಾರಿಕ ಮಾತುಗಳ ನಡುವೆ ನಮ್ಮ ಸುತ್ತಲಿನ ಜಗತ್ತು ಐಷಾರಾಮಿ ಜಗತ್ತಿನ ಸುಂದರ ಕಾಂಕ್ರಿಟ್ ಕಾಡುಗಳನ್ನು ನಿರ್ಮಿಸುವುದನ್ನು ಆನಂದದಿಂದ ಸ್ವಾಗತಿಸುತ್ತಿದ್ದೇವೆ.

ಈ ಜೆಸಿಬಿ ರಸ್ತೆಗಳಲ್ಲಿ ಮಾಡುವ ಕೆಲಸವನ್ನು ಬಜೆಟ್ ಎನ್ನುವ ಸೂಟ್‌ಕೇಸ್ ಒಳಗಿನ ಅಥವಾ ನಾರುಮಡಿಯೊಳಗಿನ ಕಂತೆ ಸಂಸತ್ತಿನಲ್ಲಿ ಬೌದ್ಧಿಕ ನೆಲೆಯಲ್ಲಿ ಮಾಡುತ್ತದೆ. ನಮಗೆ ಇದು ಅರಿವಾಗುವುದೇ ಇಲ್ಲ. ಎಲ್ಲ ಕ್ಷೇತ್ರದ ಜನರೂ ವ್ಯಕ್ತಿಗತ ನೆಲೆಯಲ್ಲಿ ಬಜೆಟ್‌ನಿಂದ ನಮಗೇನು ಸೌಲಭ್ಯ, ಸವಲತ್ತು, ವಿನಾಯಿತಿ, ರಿಯಾಯಿತಿ ಅಥವಾ ಲಾಭ ದೊರೆಯುತ್ತದೆ ಎಂದು ಯೋಚಿಸುತ್ತಿ ರುತ್ತಾರೆ. ಮಧ್ಯಮ ವರ್ಗಗಳಿಗೆ ಪೆಟ್ರೋಲ್ ಡೀಸೆಲ್ ಬೆಲೆ, ಆದಾಯ ತೆರಿಗೆ ವಿನಾಯಿತಿ, ಚಿನ್ನ ಬೆಳ್ಳಿಯ ಬೆಲೆ ಮತ್ತು ಮನೆಕಟ್ಟಲು ದೊರೆಯುವ ಸಾಲ/ತೆರಿಗೆ ವಿನಾಯಿತಿ ಇಷ್ಟೇ ಸಾಕು. 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಘಟಶ್ರಾದ್ಧ ಮಾಡಲು ಗಂಗಾನದಿಯ ತಟದಲ್ಲಿ ವೇದಿಕೆ ನಿರ್ಮಿಸಲಾಗುತ್ತಿದ್ದರೂ ಸಂಘಟಿತ ಕಾರ್ಮಿಕರು ಮುಗುಮ್ಮಾಗಿ ಹೊದ್ದು ಮಲಗಿಬಿಡುತ್ತಾರೆ. ಮುಷ್ಕರದ ಕರೆ ಬಂದಾಗ ನಿದ್ರೆಯಿಂದ ಎಚ್ಚೆತ್ತು ಜಿಂದಾಬಾದ್, ಮುರ್ದಾಬಾದ್, ಧಿಕ್ಕಾರ ಕೂಗುತ್ತಾ ಬಾವುಟಗಳನ್ನು ಮಡಿಚಿಟ್ಟು ಮತ್ತೆ ನಿದ್ರೆಗೆ ಜಾರಿಬಿಡುತ್ತಾರೆ. ದೂರದ ದಿಬ್ಬದ ಮೇಲೆ ನಿಂತ ಭೂಹೀನ ಕೃಷಿಕ ಮರದ ಟೊಂಗೆ ತನ್ನ ಭಾರ ತಡೆಯುತ್ತದೋ ಇಲ್ಲವೋ ಎಂದು ಯೋಚಿಸುತ್ತಾ ನಿಂತಿರುತ್ತಾನೆ. ನಮಗೆ ಈತ ಕಾಣುವುದೇ ಇಲ್ಲ. ನಾವು ಏನು ಮಾಡಬೇಕು? ಈ ಪ್ರಶ್ನೆಗೂ ಮುನ್ನ ಈ ‘ನಾವು’ ಎಂದರೆ ಯಾರು ಎಂದು ಸ್ಪಷ್ಟಪಡಿಸಿಕೊಳ್ಳಬೇಕು. ಈ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರೆಲ್ಲರೂ ಈ ಗುಂಪಿಗೆ ಸೇರುವುದಿಲ್ಲ. ಏಕೆಂದರೆ ವಾಣಿಜ್ಯ ಮಂಡಲಿಗಳಿಗೆ ಅಸಮಾಧಾನ ಇನ್ನೂ ಹೆಚ್ಚಾಗಿರುತ್ತದೆ. ಕಾರ್ಪೊರೇಟ್ ಉದ್ಯಮಿಗಳು ಇನ್ನೂ ಹೆಚ್ಚಿನ ತೆರಿಗೆ ವಿನಾಯಿತಿ ನಿರೀಕ್ಷಿಸಿರುತ್ತಾರೆ. ಇಲ್ಲಿ ನಾವು ಎಂದರೆ ನಾಳಿನ ಬದುಕಿನ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿರುವ ಈ ದೇಶದ ಜನಸಾಮಾನ್ಯರು. ಕೃಷಿ ಕಾರ್ಮಿಕರು, ಭೂಹೀನರು, ರಸ್ತೆ ಬದಿ ವ್ಯಾಪಾರಿಗಳು, ಪೆಟ್ಟಿಗೆ ಅಂಗಡಿಯವರು, ತಳ್ಳು ಗಾಡಿಯ ವರ್ತಕರು, ದಿನಗೂಲಿ ನೌಕರರು, ಗುತ್ತಿಗೆ ನೌಕರರು, ಪೌರ ಕಾರ್ಮಿಕರು ಮತ್ತು ಮುಂದಿನ ದಿನಗಳಲ್ಲಿ ಬೀದಿಗೆ ತಳ್ಳಲ್ಪಡುವ ಸಂಘಟಿತ ಕ್ಷೇತ್ರದ ನೌಕರರು ಇತ್ಯಾದಿ. ನಾವು ಈ ಜಾಗತಿಕ ಬಂಡವಾಳದ ಪ್ರಹಾರವನ್ನು ವೀಳ್ಯದೆಲೆ ನೀಡಿ ಸ್ವಾಗತಿಸಿ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳಬೇಕೋ ಅಥವಾ ನಮಗೂ ಒಂದು ಬದುಕು ಎನ್ನುವುದಿದೆ ಎಂದು ಅರಿತು ಬದುಕನ್ನು ಹಸನಾಗಿಸುವ ಮಾರ್ಗಗಳಿಗಾಗಿ ತಡಕಾಡಬೇಕೋ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುತ್ತಾ ಮುನ್ನಡೆಯೋಣ. ಜೆಸಿಬಿ ಕದಲುವುದಿಲ್ಲ. ನಾವು ಕದಲಿಸಬೇಕಷ್ಟೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News