ಧೋನಿಗೆ ಇಂದು 38ನೇ ಹುಟ್ಟು ಹಬ್ಬದ ಸಂಭ್ರಮ

Update: 2019-07-06 18:41 GMT

ಹೊಸದಿಲ್ಲಿ, ಜು.6: ಜುಲೈ 7ರಂದು 38ನೇ ಹುಟ್ಟಹಬ್ಬದ ಸಂಭ್ರಮದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಭಾರತದ ಕ್ರಿಕೆಟ್‌ನ ಸ್ವರೂಪವನ್ನು ಬದಲಿಸಿದ ಆಟಗಾರ ಎಂದು ಐಸಿಸಿ ಶ್ಲಾಘಿಸಿದೆ. ಎಂಎಸ್ ಧೋನಿ. ಇದು ಕೇವಲ ಒಂದು ಹೆಸರಲ್ಲ. ಭಾರತದ ಕ್ರಿಕೆಟ್‌ನ ಸ್ವರೂಪ ಬದಲಿಸಿದ ಹೆಸರು, ವಿಶ್ವದಾದ್ಯಂತ ಮಿಲಿಯಾಂತರ ಜನರಿಗೆ ಪ್ರೇರಣೆ ನೀಡಿದ ಹೆಸರು, ನಿರಾಕರಿಸಲಾಗದ ಪರಂಪರೆ- ಎಂದು ಐಸಿಸಿ ವೀಡಿಯೊ ಸಹಿತ ಟ್ವೀಟ್ ಮಾಡಿದೆ. ವೀಡಿಯೊದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲರ್ ಜಸ್‌ಪ್ರೀತ್ ಬುಮ್ರಾ ತಮ್ಮ ಆಟದ ಕೌಶಲ್ಯಕ್ಕೆ ಧೋನಿ ಯಾವ ರೀತಿ ಪ್ರಭಾವ ಬೀರಿದ್ದರು ಎಂದು ವಿವರಿಸಿದ್ದಾರೆ. ‘‘ಹೊರಗಿನಿಂದ ನೋಡುವುದಕ್ಕೂ ವ್ಯಕ್ತಿಯ ಒಳಗೆ ಏನು ಸಂಭವಿಸುತ್ತದೆ ಎಂಬುದಕ್ಕೂ ವ್ಯತ್ಯಾಸವಿದೆ. ಅವರು ಯಾವಾಗಲೂ ತಾಳ್ಮೆಯ, ಶಾಂತ ಮನಸ್ಥಿತಿಯ ಆಟಗಾರನಾಗಿದ್ದಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಅವರು ಎಂದಿಗೂ ನನ್ನ ನಾಯಕರಾಗಿದ್ದಾರೆ ಮತ್ತು ನಾಯಕರಾಗಿಯೇ ಇರುತ್ತಾರೆ. ನಮ್ಮಾಳಗಿನ ಪರಸ್ಪರ ತಿಳುವಳಿಕೆ ಯಾವಾಗಲೂ ಅದ್ಭುತವಾಗಿತ್ತು. ಅವರ ಸಲಹೆಯನ್ನು ಕೇಳಲು ನಾನು ಯಾವಾಗಲೂ ಸಿದ್ಧನಾಗಿರುತ್ತಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. 2016ರಲ್ಲಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಾಗ ಅವರು ತಂಡದ ನಾಯಕರಾಗಿದ್ದರು. ಅವರು ತಾಳ್ಮೆ ಮತ್ತು ಶಾಂತ ಮನೋಭಾವ ತಂಡದ ಮೇಲೆ ಪ್ರಭಾವ ಬೀರುತ್ತಿದೆ ಮತ್ತು ಅವರು ಯಾವಾಗಲೂ ನೆರವು ನೀಡಲು ಸಿದ್ಧರಿದ್ದರು ಎಂದು ಬುಮ್ರಾ ಹೇಳಿದ್ದಾರೆ. ವೀಡಿಯೊದಲ್ಲಿ ಕಾಣಿಸಿ ಕೊಳ್ಳುವ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್, ಧೋನಿಯನ್ನು ಮಿಸ್ಟರ್ ಕೂಲ್ ಎಂದು ಬಣ್ಣಿಸಿದ್ದಾರೆ ಮತ್ತು ಧೋನಿ ತನಗೆ ಆದರ್ಶ ಕ್ರಿಕೆಟಿಗ ಎಂದಿದ್ದಾರೆ. ಆಟದ ಅಂಗಣ ದಲ್ಲಿ ಅವರ ವ್ಯಕ್ತಿತ್ವ ನನಗೆ ಇಷ್ಟವಾಗಿದೆ. ವಿಕೆಟ್‌ನ ಹಿಂದುಗಡೆ ಮಿಂಚಿನಂತೆ ಸ್ಪಂಪಿಂಗ್ ನಡೆಸುವ ಚಾಕಚಕ್ಯತೆ ಇದೆ. ಆಡುವಾಗಲೂ ಅತ್ಯಂತ ಶಾಂತರಾಗಿರುತ್ತಾರೆ. ಅವರೊಬ್ಬ ಕ್ರೀಡೆಯ ಮಹಾನ್ ರಾಯಭಾರಿಯಾಗಿದ್ದು ತಾನವರ ಬಹುದೊಡ್ಡ ಅಭಿಮಾನಿ ಎಂದು ಬಟ್ಲರ್ ಹೇಳಿದ್ದಾರೆ.

 ಧೋನಿಯನ್ನು ಶ್ಲಾಘಿಸಿರುವ ಇಂಗ್ಲೆಂಡಿನ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಕ್ರಿಕೆಟ್‌ನ ಮಹಾನ್ ಆಟಗಾರರಲ್ಲಿ ಅವರೊಬ್ಬರು. ಅಸಾಧಾರಣ ವಿಕೆಟ್ ಕೀಪರ್. ಅವರಂತೆ ಅತ್ಯುತ್ತಮರಾಗಲು ಎಲ್ಲರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ಆಟಗಾರನೊಬ್ಬ ಪಡೆಯಬಹುದಾದ ಎಲ್ಲಾ ಪ್ರಮುಖ ಪ್ರಶಸ್ತಿಗಳನ್ನೂ ಧೋನಿ ಗೆದ್ದಿದ್ದಾರೆ. ಐಸಿಸಿ ವಿಶ್ವಕಪ್(50 ಓವರ್), ಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪ್ರಶಸ್ತಿ ಗೆದ್ದಿರುವ ವಿಶ್ವದ ಏಕೈಕ ನಾಯಕ. ಅಲ್ಲದೆ ಭಾರತವನ್ನು ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಮುನ್ನಡೆಸಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ನ ನಾಯಕತ್ವ ವಹಿಸಿ ತಂಡ ಮೂರು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ‘ಗ್ರೇಟ್ ಫಿನಿಶರ್’ ಎಂಬ ಖ್ಯಾತಿ ಪಡೆದಿರುವ ಧೋನಿ ಈ ಬಾರಿಯ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು ಇದುವರೆಗೆ 223 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News