ಭಾರತಕ್ಕೆ ನ್ಯೂಝಿಲ್ಯಾಂಡ್ ಎದುರಾಳಿ ಆಸ್ಟ್ರೇಲಿಯ-ಇಂಗ್ಲೆಂಡ್

Update: 2019-07-07 18:54 GMT

ಲಂಡನ್, ಜು.7: ಐಸಿಸಿ ವಿಶ್ವಕಪ್ 2019 ಆವೃತ್ತಿಯ ರೌಂಡ್ -ರಾಬಿನ್ ಲೀಗ್ ಹಂತದ ಎಲ್ಲ ಪಂದ್ಯಗಳು ಕೊನೆಗೊಂಡಿದ್ದು, ಒಟ್ಟು 10 ತಂಡಗಳ ಪೈಕಿ ಭಾರತ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಕೊಂಡು ಸೆಮಿಫೈನಲ್‌ನಲ್ಲಿ ಅವಕಾಶ ಪಡೆದಿದೆ.

 ಮ್ಯಾಂಚೆಸ್ಟರ್‌ನಲ್ಲಿ ಜುಲೈ 9ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಭಾರತ ತಂಡ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಜು.11ರಂದು ಎರಡನೇ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಆತಿಥೇಯ ಇಂಗ್ಲೆಂಡ್‌ನ ಸವಾಲು ಎದುರಾಗಲಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಭಾರತ 9 ಪಂದ್ಯಗಳಲ್ಲಿ 7 ಗೆಲುವು , 1 ಸೋಲು ಮತ್ತು 1 ಪಂದ್ಯ ಮಳೆಯಿಂದ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಒಟ್ಟು 15 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೇರಿದೆ.

   ಇದೇ ವೇಳೆ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ 2 ಪಂದ್ಯದಲ್ಲಿ ಸೋತಿದೆ , 7 ಗೆಲುವು ದಾಖಲಿಸಿ 14 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದೆ. ಮೊದಲ ಬಾರಿ ವಿಶ್ವಕಪ್ ಗೆಲ್ಲುವ ಪ್ರಯತ್ನ ನಡೆಸಿರುವ ಇಂಗ್ಲೆಂಡ್ 3 ಸೋಲು, 6 ಗೆಲುವಿನೊಂದಿಗೆ 12 ಅಂಕ ಪಡೆದು ಮೂರನೇ ಸ್ಥಾನ ಮತ್ತು ನ್ಯೂಝಿಲ್ಯಾಂಡ್ 11 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಿವೀಸ್ ಆಡಿರುವ 9 ಪಂದ್ಯಗಳಲ್ಲಿ 1 ಪಂದ್ಯ ಮಳೆಯಿಂದ ರದ್ದಾಗಿತ್ತು. 5 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಭಾರತದ ವಿರುದ್ಧ ಒಂದು ಪಂದ್ಯ ಮಳೆಯಿಂದ ಕೊಚ್ಚಿ ಹೋಗಿರುವ ಕಾರಣದಿಂದಾಗಿ 1 ಅಂಕವನ್ನು ಹಂಚಿಕೊಂಡಿತ್ತು. ಮತ್ತೆ ನ್ಯೂಝಿಲ್ಯಾಂಡ್‌ಗೆ ವಿಶ್ವಕಪ್‌ನ ಲೀಗ್ ಹಂತದಲ್ಲಿ ಎದುರಿಸುವ ಅವಕಾಶ ಸಿಗದಿದ್ದರೂ, ಇದೀಗ ಸೆಮಿಫೈನಲ್‌ನಲ್ಲಿ ಸವಾಲು ನೀಡಲು ಅವಕಾಶ ಒದಗಿ ಬಂದಿದೆ.

2015ರ ವಿಶ್ವಕಪ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕ, ನ್ಯೂಝಿಲ್ಯಾಂಡ್ ಆಸ್ಟ್ರೇಲಿಯ ಸೆಮಿಫೈನಲ್ ಪ್ರವೇಶಿಸಿತ್ತು. ಈ ಬಾರಿ ದಕ್ಷಿಣ ಆಫ್ರಿಕ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ವಿಶ್ವಕಪ್‌ನ ಲೀಗ್ ಹಂತದ 45 ಪಂದ್ಯಗಳು ಕೊನೆಗೊಂಡಿದ್ದು, ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಮತ್ತು ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ರೋಹಿತ್ ಶರ್ಮಾ ರನ್, ಬೌಂಡರಿ, ಸಿಕ್ಸರ್ ಎಲ್ಲದರಲ್ಲೂ ಎಲ್ಲರನ್ನು ಮೀರಿಸಿದ್ದಾರೆ.

ರೋಹಿತ್ ಶರ್ಮಾ ಆಡಿರುವ 8 ಪಂದ್ಯಗಳಲ್ಲಿ 647 ರನ್ ಸಂಪಾದಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 140, ಸರಾಸರಿ 92.42, ಸ್ಟ್ರೈಕ್ ರೇಟ್ 92.42, ಶತಕ 5, ಅರ್ಧಶತಕ 1, ಬೌಂಡರಿ 67, ಸಿಕ್ಸರ್ 14

ಬೌಲಿಂಗ್‌ನಲ್ಲಿ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ 9 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶನ 26ಕ್ಕೆ 5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News