ಬಿಜೆಪಿ ಸೇರ್ಪಡೆ ನಿರಾಕರಿಸಿದ ಅಂಜು ಬಾಬ್ಬಿ ಜಾರ್ಜ್: ಕೇಸರಿ ಪಕ್ಷಕ್ಕೆ ಮುಜುಗರ

Update: 2019-07-08 10:35 GMT

ಬೆಂಗಳೂರು, ಜು.8: ತಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎನ್ನುವ ವರದಿಗಳನ್ನು ಮಾಜಿ ಅಥ್ಲೀಟ್ ಅಂಜು ಬಾಬ್ಬಿ ಜಾರ್ಜ್ ನಿರಾಕರಿಸಿದ್ದು, ರಾಜ್ಯ ಬಿಜೆಪಿಗೆ ಭಾರೀ ಮುಜುಗರ ತರಿಸಿದೆ.

ಅಂಜು ಅವರು ಬಿಜೆಪಿ ಸದಸ್ಯತನವನ್ನು ಸ್ವೀಕರಿಸಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಪಸ್ಥಿತಿಯಲ್ಲಿ ಅಂಜು ಅವರು ಬಿಜೆಪಿ ಧ್ವಜವನ್ನು ಹಿಡಿದಿರುವ ಫೋಟೋ ವೈರಲ್  ಆಗಿತ್ತು.

ಈ ಬಗ್ಗೆ ‘ಬೂಮ್ ಲೈವ್’ ಅಂಜು ಅವರನ್ನು ಸಂಪರ್ಕಿಸಿದಾಗ, “ನಾನು ಆ ಸಮಾರಂಭಕ್ಕೆ  ನಮ್ಮ ಕುಟುಂಬ ಸ್ನೇಹಿತರಾಗಿರುವ ವಿ ಮುರಳೀಧರನ್ (ಕೇಂದ್ರ ಸಚಿವ) ಅವರನ್ನು ಭೇಟಿಯಾಗಲು ಹೋಗಿದ್ದೆ. ನಾನು ವೇದಿಕೆ ಪಕ್ಕದಲ್ಲಿ ನಿಂತಿರುವುದನ್ನು ಕಂಡ ಬಿಜೆಪಿ ನಾಯಕರು ನನ್ನನ್ನು ವೇದಿಕೆಗೆ ಆಹ್ವಾನಿಸಿ ಬಿಜೆಪಿ ಧ್ವಜವನ್ನು ನನ್ನ ಕೈಗಿತ್ತು ಸ್ವಾಗತಿಸಿದರು. ಕ್ರೀಡೆಯೇ ನನ್ನ ಪಕ್ಷ, ನನಗೆ ಬೇರೆ ಯಾವುದೇ ಪಕ್ಷ ಸೇರುವ ಉದ್ದೇಶವಿಲ್ಲ'' ಎಂದ ಅವರು ಹೇಳಿದ್ದಾರೆ.

ಮುರಳೀಧರನ್ ಕೂಡ ಅಂಜು ತಮ್ಮನ್ನು ಭೇಟಿಯಾಗಿರುವುದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ಮುರಳೀಧರನ್ ಅವರು ಕೇರಳದ ಏಕೈಕ ಪ್ರತಿನಿಧಿಯಾಗಿದ್ದಾರೆ. ಅಂಜು ಕೂಡ ಕೇರಳದವರೇ ಆಗಿದ್ದು, ಅವರ ಪತಿ ಬೆಂಗಳೂರಿನಲ್ಲಿ ಕಸ್ಟಮ್ಸ್ ಉದ್ಯೋಗಿಯಾಗಿರುವುದರಿಂದ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News