ಮೆಸ್ಸಿ ದಾಖಲೆ ಮುರಿದ ಚೆಟ್ರಿ

Update: 2019-07-08 18:04 GMT

ಅಹ್ಮದಾಬಾದ್, ಜು.8: ಇಲ್ಲಿ ಆರಂಭಗೊಂಡ ನಾಲ್ಕು ರಾಷ್ಟ್ರಗಳ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ತಜಕಿಸ್ತಾನ ವಿರುದ್ಧ ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಗೋಲು ದಾಖಲಿಸುವ ಮೂಲಕ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಮುರಿದಿದ್ದಾರೆ.

 ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 2-4 ಅಂತರದಲ್ಲಿ ಸೋಲು ಅನುಭವಿಸಿದರೂ, ಚೆಟ್ರಿ ದಾಖಲೆ ಬರೆದಿದ್ದಾರೆ.

  ಚೆಟ್ರಿ ಪಂದ್ಯದ ಪ್ರಥಮಾರ್ಧದ 4ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು. ಇದರೊಂದಿಗೆ ಮೆಸ್ಸಿ ಅವರು 136 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ದಾಖಲಿಸಿದ್ದ 68 ಗೋಲುಗಳ ದಾಖಲೆಯನ್ನು ಚೆಟ್ರಿ ಮುರಿದರು. ಚೆಟ್ರಿ ತನ್ನ 69ನೇ ಗೋಲು ಜಮೆ ಮಾಡಿದರು. ಅವರು 109ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಗರಿಷ್ಠ ಅಂತರ್‌ರಾಷ್ಟ್ರೀಯ ಗೋಲು ದಾಖಲಿಸಿರುವ ಪೋರ್ಚುಗಲ್‌ನ ಸ್ಟಾರ್ ಕ್ರಿಶ್ಟಿಯಾನೊ ರೊನಾಲ್ಡೊ ಬಳಿಕ ಗರಿಷ್ಠ ಅಂತರ್‌ರಾಷ್ಟ್ರೀಯ ಗೋಲು ದಾಖಲಿಸಿರುವ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರೊನಾಲ್ಡೊ 158 ಪಂದ್ಯಗಳಲ್ಲಿ 88 ಗೋಲು ಗಳಿಸಿದ್ದಾರೆ,

ಇನ್ನೊಂದು ಗೋಲು: ಚೆಟ್ರಿ 41ನೇ ನಿಮಿಷದಲ್ಲಿ ಇನ್ನೊಂದು ಗೋಲು ಜಮೆ ಮಾಡಿ ತನ್ನ ಗೋಲುಗಳ ಸಂಖ್ಯೆಯನ್ನು 70ಕ್ಕೆ ಏರಿಸಿದರು. ಚೆಟ್ರಿ ಅವಳಿ ಗೋಲುಗಳ ನೆರವಿನಲ್ಲಿ ಭಾರತ ಪ್ರಥಮಾರ್ಧದಲ್ಲಿ 2-0 ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಕಜಕಿಸ್ತಾನ 4 ಗೋಲುಗಳನ್ನು ಜಮೆ ಮಾಡಿ ಗೆಲುವಿನ ನಗೆ ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News