ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್‌ಗೆ ಕಾಂಗ್ರೆಸ್ ದೂರು

Update: 2019-07-09 13:25 GMT

ಬೆಂಗಳೂರು, ಜು.9: ರಾಜ್ಯ ಸರಕಾರವನ್ನು ಅಸ್ತಿರಗೊಳಿಸಲು ಮುಂಬೈಗೆ ಹೋಗಿ ಬಿಜೆಪಿ ಜೊತೆ ಕೈ ಜೋಡಿಸಿರುವ ಶಾಸಕರ ವಿರುದ್ಧ ಇಂದು ನಡೆದ ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ನಿರ್ಣಯದಂತೆ ಸ್ಪೀಕರ್‌ಗೆ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. 

ಮಂಗಳವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್‌ರನ್ನು ಭೇಟಿ ಮಾಡಿ, ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪೀಕರ್‌ಗೆ ದೂರು ನೀಡಲಾಗಿದ್ದು, ಮುಂದಿನ ಕ್ರಮವನ್ನು ಅವರು ಕೈಗೊಳ್ಳುತ್ತಾರೆ. ಪಕ್ಷಾಂತರ ನಿಷೇಧ ಕಾಯ್ದೆ ಎಲ್ಲರಿಗೂ ಅನ್ವಯ ಆಗಲಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಆಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬ್ಲಾಕ್ ಮೇಲ್ ಮಾಡುವ, ಜನರ ತೀರ್ಪಿಗೆ ವಿರುದ್ಧ ಇರುವವರಿಗೆ ತಕ್ಕ ಕ್ರಮ ಆಗಬೇಕು. ಅನರ್ಹತೆಯ ಪ್ರಕ್ರಿಯೆ ಆರಂಭವಾಗಿದೆ. ಈಗಲಾದರೂ ಅರ್ಥ ಮಾಡಿಕೊಂಡು ಶಾಸಕರು ಮುಂದೆ ಬರಬೇಕು ಎಂದು ಅವರು ತಿಳಿಸಿದರು.

ರಾಮಲಿಂಗಾರೆಡ್ಡಿ ವಿರುದ್ಧ ಕ್ರಮವಿಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಪಕ್ಷದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಇತರರಂತೆ ಬಿಜೆಪಿಯವರ ಸೌಲಭ್ಯಗಳನ್ನು ಪಡೆದುಕೊಂಡು ಮುಂಬೈಗೆ ಹೋಗಿಲ್ಲ. ಸರಕಾರವನ್ನು ಅಸ್ತಿರಗೊಳಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದುದರಿಂದ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News