ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬಿಜೆಪಿ ಬೆದರಿಕೆ: ಝಮೀರ್ ಅಹ್ಮದ್

Update: 2019-07-09 14:10 GMT

ಬೆಂಗಳೂರು, ಜು.9: ನಮ್ಮ ಶಾಸಕರನ್ನು ಅಪಹರಿಸಿ, ಮುಂಬೈ ಹಾಗೂ ಗೋವಾದಲ್ಲಿ ಗನ್ ಪಾಯಿಂಟ್ ಮೇಲೆ ಇಟ್ಟುಕೊಂಡಿದ್ದಾರೆ. ಇಲ್ಲಿರುವ ಶಾಸಕರನ್ನು ಸಂಪರ್ಕಿಸಿ, ಬಿಜೆಪಿಗೆ ಬರದಿದ್ದರೆ ಐಟಿ ದಾಳಿ ಮಾಡಿಸುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆರೋಪಿಸಿದರು.

ಮಂಗಳವಾರ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಸರಕಾರ ರಚನೆ ಮಾಡಲು ಜನಾದೇಶ ನೀಡಿದ್ದಾರೆ. 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಯಾವ ರೀತಿಯಲ್ಲಿ ಸರಕಾರ ರಚನೆ ಮಾಡಲು ಸಾಧ್ಯ? ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂದರೆ ಅವರು ಏನು ಬೇಕಾದರೂ ಮಾಡಬಹುದೇ? ಎಂದು ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಶಾಸಕರು ತಂಗಿರುವ ಹೊಟೇಲ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತಿಯೊಬ್ಬ ಶಾಸಕನ ಮೇಲೆ ನಿಗಾ ಇಡಲು ತಲಾ ಮೂವರನ್ನು ನಿಯೋಜಿಸಲಾಗಿದೆ. ಬಿಜೆಪಿಯವರಿಗೂ ಇದಕ್ಕೆ ಸಂಬಂಧವಿಲ್ಲ ಎಂದರೆ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ನಾವು ಸರಕಾರ ರಚನೆ ಮಾಡುವುದಿಲ್ಲವೆಂದು ಘೋಷಿಸಲಿ ಎಂದು ಅವರು ಸವಾಲು ಹಾಕಿದರು.

ಮುಂಬೈ ಹಾಗೂ ಗೋವಾಗೆ ಹೋಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಜೊತೆ ನಾವು ಸಂಪರ್ಕ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲಿ. ಅನಗತ್ಯವಾಗಿ ಅವರು ನಾಟಕ ಮಾಡುತ್ತಿದ್ದಾರೆ. ಅಧಿಕಾರದ ದಾಹದಿಂದ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಜನಾದೇಶ ಇರಲಿ, ಇಲ್ಲದಿರಲಿ ಅವರಿಗೆ ಅಧಿಕಾರ ಬೇಕಷ್ಟೇ. ಆಪರೇಷನ್ ಕಮಲದಲ್ಲಿ ಅವರು ನಿಸ್ಸೀಮರು. 2008ರಲ್ಲಿಯೂ 110 ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಆಗಲೂ ಆಪರೇಷನ್ ಕಮಲ ಮಾಡಿ ಸರಕಾರ ರಚನೆ ಮಾಡಿದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News