'ಶಾಸಕರ ರಾಜೀನಾಮೆ'ಯ ಚರ್ಚೆಗೆ ಬಲಿಯಾಯಿತು ಬಿಬಿಎಂಪಿ ಸಭೆ
ಬೆಂಗಳೂರು, ಜು. 9: ಜನರ ಸಮಸ್ಯೆಗಳ ಚರ್ಚೆಗೆ ಕರೆದಿದ್ದ ಬಿಬಿಎಂಪಿ ಕೌನ್ಸಿಲ್ ಸಭೆಯನ್ನು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ಗದ್ದಲ, ಗಲಾಟೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದೂಡಲಾಯಿತು.
ಎರಡು ಗಂಟೆಗಳ ತಡವಾಗಿ ಆರಂಭವಾದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ, ಶಾಸಕರ ರಾಜೀನಾಮೆ ವಿಚಾರ ಪ್ರಸ್ತಾಪಗೊಂಡಿದ್ದರಿಂದ ಪರಸ್ಪರ ವಾದ-ವಿವಾದ ನಡೆಯಿತು. ಕಾಂಗ್ರೆಸ್ ಸದಸ್ಯ ವೇಲುನಾಯಕ್ ನಮ್ಮ ಕ್ಷೇತ್ರದ ಶಾಸಕರು ಎಲ್ಲಿದ್ದಾರೋ ತಿಳಿಯುತ್ತಿಲ್ಲ, ಅವರನ್ನು ಕರೆ ತರಬೇಕೆಂದರು. ಇದೇ ವೇಳೆ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ, ಕುರುಕ್ಷೇತ್ರ ಆರಂಭವಾಗಿದೆ, ಶಾಸಕರ ಬಗ್ಗೆ ಚಿಂತಿಸಬೇಡಿ ಎಂದರು.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಬಿಜೆಪಿ ಪಕ್ಷದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಬಿಜೆಪಿ ನಾಯಕರು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಿ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುತ್ತಿದ್ದಾರೆಂದು ಮಾಜಿ ಮೇಯರ್ ಜಿ.ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಕಾಂಗ್ರೆಸ್ ಸದಸ್ಯರಾದ ಎಂ. ಶಿವರಾಜ್, ಆರ್.ಎಸ್. ಸತ್ಯನಾರಾಯಣ, ಪಾರ್ಥಿಬನ್ ಸೇರಿದಂತೆ ಎಲ್ಲರೂ ಬಿಜೆಪಿ ಡೌನ್ ಡೌನ್, ಬಿಜೆಪಿಗೆ ಧಿಕ್ಕಾರ ಎಂದು ಮೇಯರ್ ಪೀಠದ ಎದುರು ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಕೆರಳಿದ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಗೂ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ಸದಸ್ಯರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶೇಮ್ ಶೇಮ್ ಎಂದು ತರಾಟೆಗೆ ತೆಗೆದುಕೊಂಡು, ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸುತ್ತಾರೆ ಎಂದರೆ, ಅದಕ್ಕಿಂತ ಹೆಚ್ಚಿನ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯರು, ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರಗಳನ್ನು ಕೂಗಲಾರಂಭಿಸಿದರು. ಈ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಗೊಂದಲದ ಗೂಡಾಯಿತು. ಜನರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡುವಂತೆ ಧ್ವನಿವರ್ದಕದ ಮೂಲಕ ಮೇಯರ್ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ಹೀಗಾಗಿ, ಸಭೆಯನ್ನು ಅವರು ಮುಂದೂಡಲಾಗಿದೆ ಎಂದು ಹೇಳಿ ನಿರ್ಗಮಿಸಿದರು.
ಕ್ಷಮೆಯಾಚನೆಗೆ ಆಗ್ರಹ: ಅನಗತ್ಯವಾಗಿ ಪಾಲಿಕೆ ಸಭೆಯನ್ನು ಮುಂದೂಡಿ, ಸಾರ್ವಜನಿಕರ ತೆರಿಗೆ ಹಣವನ್ನು ಹಾಳುಮಾಡಿರುವ ಮೇಯರ್ ಗಂಗಾಂಬಿಕೆ ನಗರದ ಜನತೆಯ ಕ್ಷಮೆಯಾಚಿಸುವಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.
ಪ್ರತಿಪಕ್ಷಗಳು ಪ್ರತಿಭಟನೆ, ಧರಣಿ ನಡೆಸುವುದು ಸಹಜ. ಆದರೆ, ಆಡಳಿತ ಪಕ್ಷದವರೇ ಸಭೆಯಲ್ಲಿ ಗಲಾಟೆ ನಡೆಸಿರುವುದು ಅಸಂಭದ್ದ. ಹೀಗಾಗಿ, ಸಭೆಯಲ್ಲಿ ಗದ್ದಲ ನಡೆಸಿದ, ಸಭೆ ನಡೆಸಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಮೇಯರ್ ಅಮಾನತು ಮಾಡಬೇಕು ಎಂದರು.
ಪಾಲಿಕೆಯ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಷ್ಟೇ ಇರುವುದಿಲ್ಲ ಹಾಗೂ ನಾನು ಕಾಂಗ್ರೆಸ್ ಪಕ್ಷವನ್ನಷ್ಟೇ ಪ್ರತಿನಿಧಿಸುವುದಿಲ್ಲ. ಇಲ್ಲಿರುವ 198 ಸದಸ್ಯರನ್ನು ಪ್ರತಿನಿಧಿಸುತ್ತೇನೆ. ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್-ಬಿಜೆಪಿ ಪಕ್ಷದವರ ನಡುವೆ ಮಾತಿನ ಚಕಮಕಿ, ವಾದ-ವಿವಾದ ನಡೆಯಿತು. ಎಷ್ಟೇ ಸಮಾಧಾನ ಮಾಡಿದರೂ ಸದಸ್ಯರು ಈ ಕಡೆ ಗಮನ ಹರಿಸದ ಹಿನ್ನೆಲೆಯಲ್ಲಿ ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಯಿತು.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್
ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡುವ ಮೂಲಕ ಖರೀದಿ ಮಾಡಲು ಮುಂದಾಗಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪ್ರತಿಭಟನೆ ನಡೆಸಿದೆವು. ನಾವು ಸಭೆಯಲ್ಲಿ ಯಾವುದೇ ವಿಷಯ ಚರ್ಚಿಸಲು ಸಿದ್ಧರಿದ್ದೇವೆ.
-ಅಬ್ದುಲ್ ವಾಜಿದ್, ಆಡಳಿತ ಪಕ್ಷದ ನಾಯಕ