ಐಎಂಎ ವಂಚನೆ ಪ್ರಕರಣ: ಎಸ್‌ಐಟಿಯಿಂದ ರೋಶನ್ ಬೇಗ್‌ಗೆ ನೋಟಿಸ್ ?
ಬೆಂಗಳೂರು, ಜು.9: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಅಮಾನತು ಆಗಿರುವ ಶಿವಾಜಿನಗರ ಶಾಸಕ ರೋಶನ್ ಬೇಗ್‌ಗೆ ಸಿಟ್ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಗುರುವಾರ(ಜು.11) ವಿಚಾರಣೆಗೆ ಖುದ್ದು ಹಾಜರಾಗುವಂತೆ ನೋಟಿಸ್‌ನಲ್ಲಿ ರೋಶನ್ ಬೇಗ್ ಅವರಿಗೆ ಸಿಟ್ ಸೂಚಿಸಿರುವುದಾಗಿ ತಿಳಿದುಬಂದಿದೆ.
ಐಎಂಎ ಸಮೂಹ ಸಂಸ್ಥೆಯ ಮುಖ್ಯಸ್ಥ ಮನ್ಸೂರ್‌ಖಾನ್ ಪರಾರಿಯಾಗುವ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಶಾಸಕ ರೋಶನ್ ಬೇಗ್ ಅವರ ಬಳಿ ತನ್ನ ಕೋಟ್ಯಂತರ ರೂಪಾಯಿ ಹಣ ಇದೆ ಸೇರಿದಂತೆ ಹಲವು ವಿಷಯಗಳ ಕುರಿತು ಗಂಭೀರ ಆರೋಪ ಮಾಡಿದ್ದ ಎನ್ನಲಾಗಿದೆ.
ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಟ್ ಅಧಿಕಾರಿಗಳು ಮನ್ಸೂರ್‌ಖಾನ್ ವಿಡಿಯೊ ಮತ್ತು ಆತನ ಬ್ಯಾಂಕ್ ಖಾತೆಗಳ ಹಣ ವರ್ಗಾವಣೆ ಮಾಹಿತಿ ಆಧರಿಸಿ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ಶಂಕರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ, ಇದೀಗ ರೋಶನ್ ಬೇಗ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.