ಬೆಂಗಳೂರಿಗೆ ಆಗಮಿಸಿದ ಗುಲಾಂ ನಬಿ ಆಝಾದ್
Update: 2019-07-09 20:57 IST
ಬೆಂಗಳೂರು, ಜು.9: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅಸ್ತಿತ್ವ ಡೋಲಾಯಮಾನವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ‘ಟ್ರಬಲ್ ಶೂಟರ್’ ಎಂದು ಬಿಂಬಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಮಂಗಳವಾರ ಬೆಂಗಳೂರಿಗೆ ಬಂದಿದ್ದಾರೆ.
ನಗರದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಲಾಂ ನಬಿ ಆಝಾದ್, ರಾಜ್ಯ ಸರಕಾರವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಮುಂಬೈಗೆ ಹೋಗಿರುವ ಎಲ್ಲ ಶಾಸಕರು ವಾಪಸ್ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗ ತಾನೇ ಬೆಂಗಳೂರಿಗೆ ಬಂದಿದ್ದೇನೆ. ಈಗಲೇ ನಾನು ಏನು ಹೇಳಲು ಸಾಧ್ಯವಿಲ್ಲ. ಸದ್ಯದ ಬೆಳವಣಿಗೆಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ಮುಖಂಡರ ಜೊತೆ ಚರ್ಚೆ ಮಾಡಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಅವರು ಹೇಳಿದರು.