ನಿಮ್ಮ ಬ್ಯಾಂಕ್ ವಹಿವಾಟುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ ?

Update: 2019-07-09 16:07 GMT

ಆಧುನಿಕ ಬ್ಯಾಂಕಿಂಗ್ ತಂತ್ರಜ್ಞಾನದಿಂದಾಗಿ ನಾವು ಬಟನ್ ಕ್ಲಿಕ್ಕಿಸುವ ಮೂಲಕ ನಮ್ಮ ಹಣವನ್ನು ತಲುಪಲು ಸಾಧ್ಯವಾಗಿದೆ. ಆದರೆ ಇಂತಹ ತಂತ್ರಜ್ಞಾನಗಳನ್ನೇ ಬಳಸಿ ಸೈಬರ್ ಖದೀಮರು ನಮಗರಿವಿಲ್ಲದೆ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಎಗರಿಸುತ್ತಾರೆ. ಹೀಗಾಗಿ ನಾವು ವಂಚನೆಗೆ ಸಿಲುಕದಂತೆ ಅಥವಾ ನಮ್ಮ ಹಣದ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಸೌಲಭ್ಯಗಳನ್ನು ಜಾಣತನದಿಂದ ಬಳಸಬೇಕಾಗುತ್ತದೆ. ಬ್ಯಾಂಕಿಂಗ್ ವಂಚನೆಗಳಿಗೆ ಬಲಿಯಾಗದಿರಲು ಅನುಸರಿಸಬಹುದಾದ ಕೆಲವು ಸರಳ ಹೆಜ್ಜೆಗಳಿಲ್ಲಿವೆ.

►ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಎಚ್ಚರಿಕೆಯಿರಲಿ

ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವರು ತಮ್ಮ ನೆಟ್ ಬ್ಯಾಂಕಿಂಗ್ ಪಾಸ್‌ ವರ್ಡ್‌ ನೆನಪಿನಲ್ಲಿಟ್ಟುಕೊಳ್ಳಬೇಕು. ಅದನ್ನು ಎಲ್ಲಿಯೂ ಬರೆದಿಡಬಾರದು ಮತ್ತು ಇನ್ನೊಬ್ಬರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಸುರಕ್ಷಿತ ನೆಟ್‌ವರ್ಕ್ ಇರುವ ನಿಮಗೆ ಗೊತ್ತಿರುವ ಕಂಪ್ಯೂಟರ್‌ನ್ನೇ ನೆಟ್ ಬ್ಯಾಂಕಿಂಗ್‌ಗಾಗಿ ಬಳಸಿ. ಸೈಬರ್ ಕೆಫೆಗಳಲ್ಲಿಯ ಕಂಪ್ಯೂಟರ್ ಅಥವಾ ಅಸುರಕ್ಷಿತ ನೆಟ್‌ವರ್ಕನ್ನೆಂದಿಗೂ ಬಳಸಬೇಡಿ. ಮೊಬೈಲ್ ನೆಟ್ ಬ್ಯಾಂಕಿಂಗ್‌ಗಾಗಿ ಇನ್ನೊಬ್ಬರ ಮೊಬೈಲ್‌ನ್ನೆಂದೂ ಬಳಸಬೇಡಿ. ಲಾಗಿನ್ ವಿವರಗಳನ್ನು ದಾಖಲಿಸಲು ಕಂಪ್ಯೂಟರ್ ಕೀಬೋರ್ಡ್ ಬದಲು ಹೋವರಿಂಗ್ ಡಿಜಿಟಲ್ ಕೀಬೋರ್ಡ್ ಅಥವಾ ಆನ್-ಸ್ಕ್ರೀನ್ ಕೀಬೋರ್ಡ್‌ನ್ನು ಬಳಸಿ. ವೆಬ್‌ಸೈಟ್ ಬಳಕೆಯ ಬಳಿಕ ಲಾಗ್ ಔಟ್ ಆಗಲು ಮರೆಯಬೇಡಿ.

►ಚೆಕ್‌ಬುಕ್ ಪರಿಶೀಲನೆ

ನಿಮ್ಮ ಚೆಕ್‌ಬುಕ್‌ಗಳನ್ನು ಯಾವಾಗಲೂ ಸುರಕ್ಷಿತವಾದ ಸ್ಥಳದಲ್ಲಿರಿಸಬೇಕು. ಸಹಿ ಮಾಡಿದ ಚೆಕ್‌ಗಳನ್ನು ಚೆಕ್‌ಬುಕ್ ನಲ್ಲಿರಿಸುವುದು ಅಥವಾ ಸಹಿ ಮಾಡಿದ ಖಾಲಿ ಚೆಕ್‌ನ್ನು ಇನ್ನೊಬ್ಬರಿಗೆ ನೀಡುವುದು ಅಪಾಯಕಾರಿಯಾಗುತ್ತದೆ. ನೀವು ನೀಡಿದ ಚೆಕ್‌ಗಳ ವಿವರಗಳನ್ನು ಚೆಕ್ ಬುಕ್‌ನಲ್ಲಿಯ ರೆಕಾರ್ಡಿಂಗ್ ಸ್ಲಿಪ್‌ನಲ್ಲಿ ಬರೆದಿಟ್ಟರೆ ಅದನ್ನು ಬ್ಯಾಂಕ್ ದಾಖಲೆಯೊಂದಿಗೆ ತಾಳೆ ಹಾಕಲು ಅನುಕೂಲವಾಗುತ್ತದೆ.

► ಕ್ರೆಡಿಟ್/ಡೆಬಿಟ್ ಕಾರ್ಡ್ ಬಗ್ಗೆ ನಿಗಾ

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ನಡೆಸಲಾದ ವಹಿವಾಟುಗಳ ಸ್ಪಷ್ಟ ಮಾಹಿತಿಗಳು ನಿಮಗೆ ಗೊತ್ತಿರಬೇಕು. ನಿಮಗೆ ಗೊತ್ತಿಲ್ಲದೆ ಈ ಕಾರ್ಡ್‌ಗಳ ಮೂಲಕ ವಹಿವಾಟುಗಳು ನಡೆಯಬಹುದು. ನಿಮ್ಮ ಬ್ಯಾಂಕಿನಲ್ಲಿ ಎಸ್‌ಎಂಎಸ್ ಅಥವಾ ಇಮೇಲ್ ಅಲರ್ಟ್‌ಗಳಿಗೆ ನೊಂದಾಯಿಸಿಕೊಂಡರೆ ನಿಮ್ಮ ಕಾರ್ಡ್ ಮೂಲಕ ನಡೆಯುವ ಯಾವುದೇ ವಹಿವಾಟಿನ ಬಗ್ಗೆ ನಿಮಗೆ ತಕ್ಷಣ ಮಾಹಿತಿ ಲಭಿಸುತ್ತದೆ.

► ವಂಚನೆಯನ್ನು ವರದಿ ಮಾಡಿ

 ನಿಮ್ಮ ಕಾರ್ಡ್‌ಗಳ ದುರುಪಯೋಗವಾಗಿದೆ ಎಂದು ನೀವು ಶಂಕಿಸಿದ್ದರೆ ಒಂದು ವಾರದೊಳಗೆ ಅದನ್ನು ಬ್ಯಾಂಕ್/ಕಾರ್ಡ್ ನೀಡಿದ ಸಂಸ್ಥೆಗೆ ತಿಳಿಸಬೇಕಾಗುತ್ತದೆ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿದ ಬಳಿಕ ಸ್ಟೇಟ್‌ಮೆಂಟ್‌ಗಳು ಮತ್ತು ಶಂಕಾತ್ಮಕ ವಹಿವಾಟಿನ ಕುರಿತು ಬಂದಿರುವ ಎಸ್‌ಎಂಎಸ್ ಅಲರ್ಟ್‌ಗಳಂತಹ ಸಾಕ್ಷಗಳೊಂದಿಗೆ ಬ್ಯಾಂಕಿಗೆ ವಿಧ್ಯುಕ್ತವಾಗಿ ಲಿಖಿತ ದೂರನ್ನು ಸಲ್ಲಿಸಬೇಕು. ಈ ಬಗ್ಗೆ ಪೊಲೀಸ್ ದೂರನ್ನೂ ದಾಖಲಿಸಿದರೆ ಅದು ಸೈಬರ್ ಅಪರಾಧ ಘಟಕಕ್ಕೆ ತಲುಪುತ್ತದೆ.

►ಗಮನಿಸಬೇಕಾದ ಅಂಶಗಳು

ಇಂಟರ್‌ನೆಟ್ ಬ್ಯಾಂಕಿಂಗ್ ನಡೆಸುತ್ತಿರುವಾಗ ನಿಮ್ಮ ಪಾಸ್‌ವರ್ಡ್‌ನ್ನು ಸೇವ್ ಮಾಡಬೇಕೇ ಎಂದು ನೀವು ಬಳಸುತ್ತಿರುವ ಬ್ರೌಸರ್ ಕೇಳುತ್ತದೆ. ಇದಕ್ಕೆಂದೂ ಅನುಮತಿ ನೀಡಬೇಡಿ.

 ನೆಟ್ ಬ್ಯಾಂಕಿಂಗ್ ನಡೆಸುವಾಗ ಅಥವಾ ನೆಟ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ವಂಚಕ ಸೈಟ್‌ಗಳು ಮತ್ತು ಆ್ಯಪ್‌ಗಳ ಬಗ್ಗೆ ಎಚ್ಚರಿಕೆಯಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News