ಜಗತ್ತನ್ನು ಆಳುತ್ತಿರುವುದು ಸಂವಿಧಾನವೇ ಹೊರತು ಧರ್ಮವಲ್ಲ: ಮುರುಘಾ ಶ್ರೀ

Update: 2019-07-09 16:56 GMT

ಬೆಂಗಳೂರು, ಜು.9: ಇವತ್ತು ಜಗತ್ತನ್ನು ಸಂವಿಧಾನ ಆಳುತ್ತಿದೆಯೆ ಹೊರತು ಧರ್ಮಗಳಲ್ಲವೆಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಬಸವ ಕೇಂದ್ರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ವ್ಯಕ್ತಿಯ ನಿಲುವು; ಸಮುದಾಯದ ಗೆಲವು’ ವಿಷಯ ಕುರಿತು ಮಾತನಾಡಿದ ಅವರು, ಸಂವಿಧಾನವೆಂದರೆ ವಿಚಾರಗಳು, ವಿಚಾರಗಳ ಮೂರ್ತಸ್ವರೂಪವೇ ನಿಲುವುಗಳು. ನಿಲುವುಗಳಿಗೆ ಬೌದ್ಧಿಕ ಶಕ್ತಿ ಬೇಕಾಗಿರುತ್ತದೆ. ಆ ಬೌದ್ಧಿಕ ಶಕ್ತಿ ಹೊಂದಿದವರು ದೇಶದ ಭವಿಷ್ಯತ್ತಿಗೆ ಸೂಕ್ತವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ವಿಚಾರಗಳು ವೈಯಕ್ತಿಕ, ನಿಲುವುಗಳು ಸಾರ್ವತ್ರಿಕವೆಂದು ತಿಳಿಸಿದರು.

ಭಾರತವು ಹಲವು ಧರ್ಮಗಳ ಉಗಮಸ್ಥಾನ. ಅವರವರ ಧರ್ಮ ಅವರವರಿಗೆ ಪ್ರೀತಿ. ಇವುಗಳಿಗೆ ಸಂವಿಧಾನದ ಮನ್ನಣೆಯೂ ಇದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವೆಂದರೆ ಅನೇಕ ವಿಧವಾದ ವಿಚಾರಗಳು ಚಿಂತನೆಗಳು ಇವೆ. ಹಾಗಾಗಿ ಸಂವಿಧಾನ ವಿಚಾರಗಳ ಸಂಗಮವಾಗಿ ನಮ್ಮನ್ನು ಆಳುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ಅಧಿಕಾರಿ ಪರಶುರಾಮ ಸಿನಾಳ್ಕರ ಮಾತನಾಡಿ, 12ನೆ ಶತಮಾನದ ವಚನಕ್ರಾಂತಿಯು ತನ್ನದೇ ಆದ ವಿಶೇಷತೆಯೊಂದಿಗೆ ಸಮಾಜದ ಮೇಲೆ ಅಗಾಧವಾದ ಪ್ರಭಾವ ಬೀರಿದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಚಿಂತನೆಗಳು ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ ಎಂದು ಹೇಳಿದರು.

ಈ ವೇಳೆ ಕಾರ್ಮಿಕರ ಪಡೆ ರಾಜ್ಯಾಧ್ಯಕ್ಷ ಶ್ರೀನಿವಾಸ, ವಾಲ್ಮೀಕಿ ಸೇವಾ ಸಮಿತಿಯ ಶ್ರೀನಿವಾಸ್ ಮತ್ತಿತರರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News