ಕಳವು ಪ್ರಕರಣ: ಯುವಕರಿಬ್ಬರ ಬಂಧನ

Update: 2019-07-09 17:09 GMT

ಬೆಂಗಳೂರು, ಜು.9: ನಗರದ ಎನ್‌ಆರ್ ಕಾಲನಿಯ ಅಂಗಡಿಗಳಲ್ಲಿ ನಡೆದಿದ್ದ ಕಳವು ಪ್ರಕರಣ ಸಂಬಂಧ ಯುವಕರಿಬ್ಬರನ್ನು ಬಂಧಿಸುವಲ್ಲಿ ಬಸವನಗುಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಲ್ತಾನ್ ಪಾಳ್ಯದ ನಿವಾಸಿ ಫೈಝಲ್ ಹಾಗೂ ಆರ್‌ಟಿ ನಗರದ ಕೆಂಪಾಪುರದ ವಿಕ್ರಂ ಕುಮಾರ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವಿಕ್ರಂ ಕುಮಾರ್ ಬಿಹಾರ ಮೂಲದವನಾಗಿದ್ದು, ಈ ಹಿಂದೆ ಆರ್‌ಟಿ ನಗರ, ಕೆಪಿ ಅಗ್ರಹಾರ, ಕೋರಮಂಗಲದಲ್ಲಿ ಅಂಗಡಿ ಕಳ್ಳತನ ಮಾಡಿ ಜೈಲಿಗೆ ಹೋಗಿ ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಆರ್‌ಟಿ ನಗರದಲ್ಲಿ ಕಳೆದ ಆರು ತಿಂಗಳಿನಿಂದ ವಾಸವಾಗಿದ್ದ ಆರೋಪಿಯು ಮತ್ತೊಬ್ಬ ಆರೋಪಿ ಜೊತೆ ಸೇರಿ ಅಂಗಡಿಗಳ ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತರು 6 ತಿಂಗಳಲ್ಲಿ ಬಾಣಸವಾಡಿಯಲ್ಲಿ 8 ಅಂಗಡಿ, ಕೋರಮಂಗಲ, ಮಹದೇವಪುರ, ಕೆಆರ್‌ಪುರ ಸೇರಿದಂತೆ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಎನ್‌ಆರ್ ಕಾಲನಿಯಲ್ಲಿ ಜು.1 ರಂದು ಮುಂಜಾನೆ ನಡೆದಿದ್ದ ಕಳವು ಪ್ರಕರಣವನ್ನು ದಾಖಲಿಸಿ ಬಸವನಗುಡಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಇವರ ವಶದಲ್ಲಿದ್ದ 40 ಸಾವಿರ ರೂ. ನಗದು, ಎರಡು ಮೊಬೈಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News