ಗೋಕಾಕ್ ಸಾಹಿತ್ಯ ಸಮಗ್ರ ಅಧ್ಯಯನ ಅಗತ್ಯ: ಡಾ.ಚಂದ್ರಶೇಖರ ಕಂಬಾರ

Update: 2019-07-09 17:20 GMT

ಬೆಂಗಳೂರು, ಜು.9: ಗೋಕಾಕ್‌ರ ಸಾಹಿತ್ಯ ಸಮಗ್ರವಾದ ಅಧ್ಯಯನ ನಡೆಯಬೇಕಾದ ಅಗತ್ಯವಿದೆ ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ಮಂಗಳವಾರ ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ವಿ.ಕೃ.ಗೋಕಾಕ್ ವಾಙ್ಮಯ ಟ್ರಸ್ಟ್ ಹಾಗೂ ಅಭಿನವ ಸಂಸ್ಥೆಯ ಸಹಯೋಗದಿಂದ ಆಯೋಜಿಸಿದ್ದ ವಿ.ಕೃ.ಗೋಕಾಕ್ ಜೀವನ ಮತ್ತು ಸಾಹಿತ್ಯ: ಸಮಕಾಲೀನ ಸ್ಪಂದನ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋಕಾಕ್‌ರ ಸಾಹಿತ್ಯದಲ್ಲಿ ಕಾವ್ಯವು ನವ್ಯ ಕಾಲದ ಹಲವು ಸೂಕ್ಷ್ಮತೆಗಳಿಂದ ಕೂಡಿದ್ದು, ಅವುಗಳನ್ನು ಅರಿಯಬೇಕಾದರೆ ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಇಲ್ಲದಿದ್ದರೆ ನಾವು ಗೋಕಾಕ್‌ರನ್ನು ಅರಿಯಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.

ಗೋಕಾಕ್ ಹಾಗೂ ನಾನು ಉತ್ತರ ಕರ್ನಾಟಕದವರು. ಆದರೂ ನಾನು ಅಡಿಗರ ಪ್ರಭಾವಕ್ಕೆ ಒಳಗಾದೆ. ಅಡಿಗರ ಶಿಷ್ಯರೇ ಅಧಿಕ ಸಂಖ್ಯೆಯಲ್ಲಿ ನಮ್ಮ ಕಾಲೇಜಿನಲ್ಲಿ ಅಧ್ಯಾಪಕರಿದ್ದರಿಂದ ಗೋಕಾಕ್‌ರ ಸಾಹಿತ್ಯ ನನ್ನ ಬಳಿ ಸುಳಿಯಲಿಲ್ಲ. ಆದರೆ, ಈಗ ಅನ್ನಿಸುತ್ತಿದೆ ಗೋಕಾಕ್‌ರ ಸಂಪರ್ಕ ಸಿಗದಿರುವುದರಿಂದ ಬಹಳಷ್ಟು ಕಳೆದುಕೊಂಡಿದೀನಿ ಎಂದು. ಅದು ನನಗೆ ಬಹಳಷ್ಟು ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಡಿಗರು ಮತ್ತು ಗೋಕಾಕರು ನವ್ಯ ಕಾವ್ಯವನ್ನೇ ಪ್ರತಿಪಾದಿಸಿದರೂ, ಇಬ್ಬರ ನಡುವೆ ಸಾಹಿತ್ಯದ ಕುರಿತು ಭಿನ್ನತೆ ಇತ್ತು. ಆದರೂ ಶಾಸ್ತ್ರೀಯವಾದ ಸಾಹಿತ್ಯ ಚಿಂತನೆ ಗೋಕಾಕ್‌ರ ಸಾಹಿತ್ಯದಲ್ಲಿ ಕಾಣಬಹುದು. ಕನ್ನಡ ಸಾಹಿತ್ಯಕ್ಕೆ ಗೋಕಾಕ್‌ರು ನೀಡಿದ ಕೊಡುಗೆ ಅಪಾರವಾದುದು ಎಂದು ಕಂಬಾರರು ನುಡಿದರು.

ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಹೊಸ ತಲೆಮಾರಿನ ಸಾಹಿತಿಗಳು, ಕವಿಗಳು ಹಳತನ್ನು ಮರೆಯದೇ ಹೊಸದನ್ನು ಕಟ್ಟಬೇಕು. ನಮ್ಮ ಪರಂಪರೆಯ ಜತೆಗೆ ಸಂಬಂಧ ಸೃಷ್ಟಿಗೊಳ್ಳಬೇಕು. ಕಾವ್ಯದ ಮೂಲಕ ಪರಂಪರೆಯ ಅನುಸಂಧಾನವಾಗಬೇಕು ಎಂದು ಹೇಳಿದರು.

ಗೋಕಾಕ್‌ರ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯತೆಯನ್ನು ನೋಡಬಹುದು. ಹೊಸ ಹೊಸ ಪ್ರಯೋಗಗಳಿಗೆ ಇವರ ಸಾಹಿತ್ಯ ಪ್ರೇರೇಪಣೆ ನೀಡಲಿದೆ. ಗೋಕಾಕ್‌ರದ್ದು ಶಾಸ್ತ್ರೀಯ ಬದ್ಧ ಸಾಹಿತ್ಯವಾಗಿದೆ. ಇವರ ಸಾಹಿತ್ಯದ ಕುರಿತು ಮರುಚಿಂತನೆಯಾಗಬೇಕಿದೆ ಎಂದು ತಿಳಿಸಿದರು.

ಭಾರತೀಯ ಹಾಗೂ ಪಾಶ್ಚಿಮಾತ್ಯ ಪರಂಪರೆಯನ್ನು ಬಲ್ಲ ಪ್ರಮುಖರಿಬ್ಬರಲ್ಲಿ ಗೋಕಾಕ್ ಒಬ್ಬರಾಗಿದ್ದರು. ಅವರು ಎರಡೂ ಪರಂಪರೆ ಬಲ್ಲ ವಿದ್ವಾಂಸರಾಗಿದ್ದರು ಎಂದ ಅವರು, ಇಡೀ ಭಾರತದಲ್ಲಿ ಗೋಕಾಕ್‌ರಂತೆ ವಿದ್ವತ್ ಪಡೆದವರು ಮತ್ತೊಬ್ಬರಿರಲಿಲ್ಲ. ಕನ್ನಡದಲ್ಲಿ ಅಲ್ಲದೆ, ದೇಶ-ವಿದೇಶದಲ್ಲಿ ಅವರು ಖ್ಯಾತರಾಗಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿ.ಕೃ.ಗೋಕಾಕ್ ವಾಙ್ಮಯ ಟ್ರಸ್ಟ್‌ನ ಕಾರ್ಯದರ್ಶಿ ಅನಿಲ್ ಗೋಕಾಕ್, ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲೆ ಸ್ನೇಹಲತಾ ನಾಡಿಗರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆತ್ಮಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News