ಮೈತ್ರಿ ಸರಕಾರ ಅಸ್ಥಿರ ಖಂಡಿಸಿ ರೈತ ಸಂಘ ಪ್ರತಿಭಟನೆ

Update: 2019-07-09 17:34 GMT

ಬೆಂಗಳೂರು, ಜು.9: ಮೈತ್ರಿ ಸರಕಾರದ ಶಾಸಕರು ದಿಢೀರ್ ರಾಜೀನಾಮೆ ನೀಡಿ, ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವ ಹಿನ್ನೆಲೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಪ್ರತಿಭಟನಾ ಧರಣಿ ನಡೆಸಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜಮಾಯಿಸಿದ ಸದಸ್ಯರು, ರಾಜ್ಯ ರಾಜಕಾರಣದಲ್ಲಿ ಶಾಸಕರ ಖರೀದಿ ಹಾಗೂ ರಾಜೀನಾಮೆ ಪ್ರಸಂಗಗಳು ರಾಜ್ಯದ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರುತ್ತೇವೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಶಾಸಕರ, ಸಚಿವರ ರಾಜೀನಾಮೆ ನಾಟಕಗಳನ್ನು ನೋಡಿ ಜನ ರೊಚ್ಚಿಗೇಳುವ ಮೊದಲೇ ತಮ್ಮ ತಪ್ಪನ್ನು ತಿದ್ದಿಕೊಂಡು ಸರಕಾರ ಅಭಿವೃದ್ಧಿ ಕಡೆ ಗಮನಹರಿಸಬೇಕು ಆಗ್ರಹಿಸಿದರು.

ಪ್ರಜಾಪ್ರಭುತ್ವಕ್ಕೆ ರಾಜಕೀಯ ಪಕ್ಷಗಳು ಅವಮಾನ ಮಾಡುತ್ತಿವೆ. ಸಮರ್ಪಕ ಸೇವೆ ಮಾಡದ ಶಾಸಕರನ್ನು ಕಿತ್ತೊಗೆಯಬೇಕಿದೆ. ಈ ಶಾಸಕರ ರಾಜೀನಾಮೆ ಪತ್ರಗಳು ವಿಧಾನಸಭಾ ಸಭಾಧ್ಯಕ್ಷರ ಅಂಗಳದಲ್ಲಿವೆ. ಅವರು ರಾಜೀನಾಮೆ ಸ್ವೀಕರಿಸಿದರೂ ಅಥವಾ ಸ್ವೀಕರಿಸದಿದ್ದರೂ ಸರಕಾರ ಉಳಿಯುವ ಸಂಭವ ಕಡಿಮೆ. ಆದರೆ, ಈ ರೀತಿಯ ರಾಜಕೀಯ ಬೆಳವಣಿಗೆಯನ್ನು ವಿರೋಧಿಸಬೇಕೆಂದು ಹೇಳಿದರು.

ಈ ಕೂಡಲೇ ಕುದುರೆ ವ್ಯಾಪಾರ ನಿಲ್ಲಿಸಬೇಕು. ರಾಜ್ಯ ಸಮಸ್ಯೆಗಳ ನಿವಾರಣೆಗೆ ಗಮನಹರಿಸಬೇಕು, ಪ್ರಜಾಪ್ರಭುತ್ವದ ನಿಯಮದನ್ವಯ ಸರಕಾರದ ರಚನೆಗೆ ಒತ್ತು ನೀಡಬೇಕು. ಇಲ್ಲದಿದ್ದಲ್ಲಿ, ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News