ಮೀರಾಬಾಯಿ ಚಾನುಗೆ ಚಿನ್ನ

Update: 2019-07-10 03:17 GMT

ಅಪಿಯಾ, ಜು.9: ವಿಶ್ವದ ಮಾಜಿ ಚಾಂಪಿಯನ್ ಮೀರಾಬಾಯಿ ಚಾನು ಇಲ್ಲಿ ಮಂಗಳವಾರ ಆರಂಭವಾದ ಕಾಮನ್‌ವೆಲ್ತ್ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು.

ಭಾರತದ ವೇಟ್‌ಲಿಫ್ಟಿಂಗ್ ತಂಡ ಸೀನಿಯರ್, ಜೂನಿಯರ್ ಹಾಗೂ ಯೂತ್ ವಿಭಾಗಗಳಲ್ಲಿ 8 ಚಿನ್ನ, 3 ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಸಹಿತ ಒಟ್ಟು 13 ಪದಕಗಳನ್ನು ಜಯಿಸಿದೆ.

ಮೀರಾಬಾಯಿ ಚಾನು ಹಿರಿಯ ಮಹಿಳೆಯರ 49ಕೆಜಿ ವಿಭಾಗದಲ್ಲಿ ಒಟ್ಟು 191 ಕೆಜಿ(84ಕೆಜಿ+107 ಕೆಜಿ)ತೂಕ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದರು. ಈ ಟೂರ್ನಿಯು ಒಲಿಂಪಿಕ್ಸ್ ಕ್ವಾಲಿಫೈಯರ್ ಇವೆಂಟ್ ಆಗಿದ್ದು, ಇಲ್ಲಿ ಗಳಿಸುವ ಅಂಕ 2020ರ ಟೋಕಿಯೋ ಒಲಿಂಪಿಕ್ಸ್‌ನ ಫೈನಲ್ ರ್ಯಾಂಕಿಂಗ್‌ಗೆ ಅನುಕೂಲಕರವಾಗಲಿದೆ.

 ಮೀರಾಬಾಯಿ ಎಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 199 ಕೆಜಿ(86+113 ಕೆಜಿ)ತೂಕ ಎತ್ತಿಹಿಡಿದಿದ್ದರೂ ಪದಕದಿಂದ ವಂಚಿತರಾಗಿದ್ದರು.

18 ತಿಂಗಳ ಅವಧಿಯಲ್ಲಿ ಆರು ಟೂರ್ನಿಗಳಲ್ಲಿ ವೇಟ್‌ಲಿಫ್ಟರ್‌ಗಳ ಪ್ರದರ್ಶನವನ್ನು ಆಧರಿಸಿ 2020ರ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಅಗ್ರ-ನಾಲ್ಕು ವೇಟ್‌ಲಿಫ್ಟರ್‌ಗಳು ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲಿದ್ದಾರೆ.

 ಹಿರಿಯ ಮಹಿಳೆಯರ 45 ಕೆಜಿ ಸ್ಪರ್ಧೆಯಲ್ಲಿ ಜಿಲಿ ದಾಲಾಬೆಹ್ರಾ 154 ಕೆಜಿ(70+94ಕೆಜಿ)ತೂಕ ಎತ್ತಿ ಹಿಡಿದು ಮೊದಲ ಸ್ಥಾನ ಪಡೆದರು.

ಹಿರಿಯ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಸೋರೊಖೈಬಮ್ ಬಿಂದ್ಯಾರಾಣಿ ದೇವಿ(ಸ್ನಾಚ್ 78+ಕ್ಲೀನ್-ಜರ್ಕ್ 105 ಕೆಜಿ) ಹಾಗೂ ಸಂತೋಷಿ(182 ಕೆಜಿ) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಹಿರಿಯ ಪುರುಷರ 55 ಕೆಜಿ ವಿಭಾಗದಲ್ಲಿ ರಿಶಿಕಾಂತ ಸಿಂಗ್ ಒಟ್ಟು 235 ಕೆಜಿ(105+130)ತೂಕ ಎತ್ತಿ ಹಿಡಿದು ಚಿನ್ನ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News