ಬೇಸಿಗೆ ವಿಶ್ವವಿದ್ಯಾನಿಲಯ ಕ್ರೀಡಾಕೂಟ: ದ್ಯುತಿ ಚಂದ್‌ಗೆ ಐತಿಹಾಸಿಕ ಚಿನ್ನ

Update: 2019-07-10 04:36 GMT

ಇಟಲಿ, ಜು.10: ಇಟಲಿನ ನಪ್ಲೇಸ್‌ನಲ್ಲಿ ನಡೆಯುತ್ತಿರುವ 30ನೇ ಬೇಸಿಗೆ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತದ ಹೆಮ್ಮೆಯ ಓಟಗಾರ್ತಿ ದ್ಯುತಿ ಚಂದ್ 100 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದ ಫೈನಲ್‌ನಲ್ಲಿ ಅವರು 11.31 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

ಇದು ಈ ಕ್ರೀಡಾಕೂಟದಲ್ಲಿ ಭಾರತದ ಮೊಟ್ಟಮೊದಲ ಚಿನ್ನದ ಪದಕವಾಗಿದೆ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತೀಯ ಓಟಗಾರ್ತಿಯೊಬ್ಬರು ಚಿನ್ನದ ಪದಕ ಗೆಲ್ಲುತ್ತಿರುವುದು ಕೂಡಾ ಇದೇ ಮೊದಲು. ಈ ಮುನ್ನ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯರು 100 ಮೀಟರ್ ಓಟದ ಫೈನಲ್‌ಗೆ ಅರ್ಹತೆ ಪಡೆದ ನಿದರ್ಶನ ಇಲ್ಲ.

ಮಂಗಳವಾರ ಈ ಐತಿಹಾಸಿಕ ಪದಕ ಗೆದ್ದ ಬಳಿಕ ಮಾತನಾಡಿದ ಅವರು, "ವಿಶ್ವಮಟ್ಟದ ವಿವಿ ಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಹುಡುಗಿ ಎನಿಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಪದಕವನ್ನು ನನಗೆ ಸದಾ ಬೆಂಬಲ ನೀಡುತ್ತಾ ಬಂದ ಕೆಐಐಟಿ ವಿವಿ, ಅದರ ಸಂಸ್ಥಾಪಕ ಸಮಂತಾಜಿ, ಒಡಿಶಾದ ಜನತೆ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಮರ್ಪಿಸುತ್ತಿದ್ದೇನೆ" ಎಂದು ಹೇಳಿದರು.

ಸ್ವಿಡ್ಜರ್‌ಲೆಂಡ್‌ನ ಅಜ್ಲಾ ಡೆಲ್ ಪೋಂಟ್ 11.33 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸಿ ಬೆಳ್ಳಿ ಗೆದ್ದರು. ಸೆಮಿಫೈನಲ್‌ನಲ್ಲಿ ದ್ಯುತಿ 11.41 ಸೆಕೆಂಡ್‌ಗಳೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಹೀಟ್ಸ್‌ನಲ್ಲಿ 11.58 ಸೆಕೆಂಡ್‌ಗಳಲ್ಲಿ ಅವರು ಗುರಿ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News