'ನಾನು ಅವರ ಜೊತೆ ಮಾತನಾಡಿದ್ದೇನೆ': ಶಾಸಕ ಸುಧಾಕರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

Update: 2019-07-10 14:43 GMT

ಬೆಂಗಳೂರು, ಜು. 10: ನಮ್ಮ ಪಕ್ಷದ ಶಾಸಕ ಡಾ.ಕೆ.ಸುಧಾಕರ್ ಮನವೊಲಿಕೆ ವೇಳೆ ಬಿಜೆಪಿಯವರು ವಿಧಾನಸೌಧಕ್ಕೆ ಗೂಂಡಾಗಿರಿ ನಡೆಸುವ ಮೂಲಕ ಕಾನೂನು ಕೈಗೆತ್ತಿಕೊಂಡಿರುವುದು ಅಕ್ಷಮ್ಯ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ಖಂಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಶಾಸಕರಿಬ್ಬರ ರಾಜೀನಾಮೆ ಹಿನ್ನೆಲೆಯಲ್ಲಿ ನಾಟಕೀಯ ಬೆಳವಣಿಗೆಗಳ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ನಮ್ಮ ಪಕ್ಷದ ಶಾಸಕ. ಅಲ್ಲದೆ, ಆತ ನಮ್ಮ ಆತ್ಮೀಯ ಸ್ನೇಹಿತ. ಅವರೊಂದಿಗೆ ನಮ್ಮ ಮುಖಂಡರು ಸಮಾಲೋಚನೆ ನಡೆಸಿದ್ದಾರೆ. ನನ್ನ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದವರು ಹೇಳಿದ್ದಾರೆ. ನಾವು ಸುಧಾಕರ್ ರನ್ನು ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ಅವರು ನಮ್ಮ ಸ್ನೇಹಿತರು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಅಲ್ಲಿ ಬಿಜೆಪಿಯವರಿಗೆ ಏನು ಕೆಲಸ. ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಪ್ರಯತ್ನಿಸುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಇದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷದ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡುತ್ತಿದ್ದು, ಕೇಂದ್ರೀಯ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಪ್ರಜಾತಂತ್ರದ ಕಗ್ಗೊಲೆ ಮಾಡಲಾಗುತ್ತಿದೆ. ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ಎಂದು ಟೀಕಿಸಿದರು.

ಬಿಜೆಪಿಯವರು ಕಾಂಗ್ರೆಸ್ ಮುಗಿಸುತ್ತೇವೆಂದು ಭಾವಿಸಿದ್ದರೆ ಇದು ಅವರ ಮೂರ್ಖತನ. ಅಧಿಕಾರಿ ಯಾರಿಗೂ ಶಾಶ್ವತವಲ್ಲ. ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಮೈತ್ರಿ ಸರಕಾರ ಉಳಿಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

‘ಶಾಸಕ ಡಾ.ಸುಧಾಕರ್ ಅವರ ಮೇಲೆ ಯಾವುದೇ ಹಲ್ಲೆಯನ್ನು ನಡೆಸಿಲ್ಲ. ಅವರ ನಮ್ಮ ಸ್ಮೇಹಿತರು, ನಮ್ಮ ಪಕ್ಷದ ಶಾಸಕರು. ನಾವು ಅವರೊಂದಿಗೆ ಸಮಾಲೋಚನೆ ನಡೆಸುವ ವೇಳೆ ಅಲ್ಲಿ ಬಿಜೆಪಿಯವರಿಗೆ ಏನು ಕೆಲಸ. ಇದರಿಂದಲೇ ಗೊತ್ತಾಗುತ್ತದೆ, ಇದರ ಹಿಂದೆ ಬಿಜೆಪಿ ಇರುವುದು ಸ್ಪಷ್ಟ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News