ಮುಂದುವರೆದ ರಾಜೀನಾಮೆ ಪರ್ವ: 'ಕೈ-ಕಮಲ'ದ ನಡುವೆ ಮಾತಿನ ಚಕಮಕಿ, ಜಟಾಪಟಿ

Update: 2019-07-10 15:05 GMT

ಬೆಂಗಳೂರು, ಜು. 10: ಮೈತ್ರಿ ಸರಕಾರದ ವಿರುದ್ಧ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಹಾಗೂ ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ.ನಾಗರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 17ಕ್ಕೆ ಏರಿದೆ.

ಏತನ್ಮಧ್ಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರ ಮನವೊಲಿಕೆಗೆ ತೆರಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಈ ಮಧ್ಯೆ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಮಾಡುತ್ತಿದ್ದು, ಕೂಡಲೆ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಬೆಳವಣಿಗೆಗಳ ನಡುವೆಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಡಾ.ಕೆ. ಸುಧಾಕರ್ ಮನವೊಲಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲೆ ಯತ್ನಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ, ಜಟಾಪಟಿಗೆ ಕಾರಣವಾಯಿತು. ಅಲ್ಲದೆ, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಒತ್ತಡ ಹೇರಲು ಧರಣಿ-ಪ್ರತಿಭಟನೆ: ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಆವರಣದಲ್ಲಿ ಬಿಜೆಪಿ ಶಾಸಕರ ಧರಣಿ ಸತ್ಯಾಗ್ರಹ ನಡೆಸಿದರು. ಮತ್ತೊಂದು ಕಡೆ ಸರಕಾರ ಅಸ್ಥಿರಕ್ಕೆ ಮುಂದಾಗಿರುವ ಬಿಜೆಪಿ ಕ್ರಮ ಖಂಡಿಸಿ ಮೈತ್ರಿ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ಸ್ಪೀಕರ್ ಕಚೇರಿ, ರಾಜಭವನ ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿದ್ದು, ಹತ್ತು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದವು. ಡಾ.ಸುಧಾಕರ್ ಅವರನ್ನು ವಿಧಾನಸೌಧದಲ್ಲಿನ ಸಚಿವ ಕೆ.ಜೆ.ಜಾರ್ಜ್ ಕೂಠಡಿಯಲ್ಲಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಜಾರ್ಜ್ ಕೊಠಡಿ ಮುಂದೆ ಧರಣಿ ನಡೆಸಿದರು.

ಇದೆ ವೇಳೆ ಸುಧಾಕರ್ ಮನವೊಲಿಕೆಗೆ ವಿಧಾನಸೌಧಕ್ಕೆ ಧಾವಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಆಗಮಿಸಿದರು. ಇದು ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದಕ್ಕೂ ಕಾರಣವಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಜಟಾಪಟಿ ಹಿನ್ನೆಲೆಯಲ್ಲಿ ವಿಧಾನಸೌಧದ ಪ್ರವೇಶಕ್ಕೆ ಸಂಜೆ ಕೆಲಕಾಲ ನಿರ್ಬಂಧ ಹೇರಲಾಗಿತ್ತು.

ರಾಜ್ಯಪಾಲರ ಸೂಚನೆ: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಪರ- ವಿರೋಧ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಸಕ ಸುಧಾಕರ್‌ರನ್ನು 10 ನಿಮಿಷದ ಒಳಗೆ ರಾಜ್ಯಪಾಲರ ಮುಂದೆ ಹಾಜರುಪಡಿಸಲು ವಜೂಭಾಯಿ ವಾಲಾ ಅವರು ಸೂಚನೆ ನೀಡಿದರು.

ಆ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಪೊಲೀಸ್ ಭದ್ರತೆಯಲ್ಲಿ ಕೆ.ಜೆ.ಜಾರ್ಜ್ ಕೊಠಡಿಯಿಂದ ಸುಧಾಕರ್ ಅವರನ್ನು ರಾಜಭವನಕ್ಕೆ ಕರೆದೊಯ್ಯಲಾಯಿತು. ಶಾಸಕರ ದಿಢೀರ್ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳಾಗುತ್ತಿದ್ದು, ತೀವ್ರ ಕುತೂಹಲ ಸೃಷ್ಟಿಸಿದೆ.

ಈ ಮಧ್ಯೆಯೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರಾದ ಡಾ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಇಬ್ಬರು ಶಾಸಕರು ಮುಂಬೈಗೆ ತೆರಳಲಿದ್ದಾರೆಂದು ಗೊತ್ತಾಗಿದೆ.

ಅವರ ಕೆಲಸ ಅವರದ್ದು: ‘ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮತ್ತು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಇಂದು ರಾಜೀನಾಮೆ ನೀಡಿದ್ದು, ಈವರೆಗೂ ಒಟ್ಟು 17 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಕಾನೂನು ಬದ್ಧವಾಗಿ ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್‌ಕಮಾರ್ ಸ್ಪಷ್ಟಪಡಿಸಿದರು.

ಇದೇ ವೇಳೆ ಅತೃಪ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಕಾನೂನಿನ ಅನ್ವಯ ತಮ್ಮ ಕೆಲಸ ಮಾಡಲಿದ್ದಾರೆಂದರು. ಹಣಕಾಸು ಕಾಯ್ದೆಗೆ ವಿಧಾನ ಮಂಡಲದಲ್ಲಿ ಒಪ್ಪಿಗೆ ಸಿಗದಿದ್ದರೆ ಸರಕಾರ ಬೀಳಲಿದೆ. ಉಸಿರು ನಿಂತ ಮೇಲೆ ಏನಾಗುತ್ತದೆ, ಪ್ರಾಣ ಹೋಗುತ್ತದೆ ಅಷ್ಟೇ’ ಎಂದು ರಮೇಶ್‌ಕುಮಾರ್ ತಮ್ಮದೆ ದಾಟಿಯಲ್ಲಿ ಸರಕಾರದ ಭವಿಷ್ಯದ ಬಗ್ಗೆ ವಿಶ್ಲೇಷಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News