ಅಧಿಕಾರ ಕಳೆದುಕೊಳ್ಳುವಾಗ ಗೂಂಡಾಗಿರಿ ಮಾಡುತ್ತಿರುವುದು ಖಂಡನೀಯ: ಬಿಎಸ್‌ವೈ

Update: 2019-07-10 15:48 GMT

ಬೆಂಗಳೂರು, ಜು.10: ರಾಜ್ಯದಲ್ಲಿ ಗೂಂಡಾಗಿರಿಯ ಸರಕಾರ ನಡೆಯುತ್ತಿದೆ. ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ಸುಧಾಕರ್ ಅವರನ್ನು ಹಿಡಿದು ಎಳೆದಾಡಿ, ಅಪಮಾನ ಮಾಡಿ, ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅವರಿಗೆ ರಕ್ಷಣೆ ನೀಡಬೇಕಿತ್ತು. ಆದರೆ, ಸ್ಪೀಕರ್ ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಹೋಗಿರುವುದು ಆಶ್ಚರ್ಯ ತಂದಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಘಟನಾವಳಿಗಳಿಗೆ ಕಾರಣ. ಬೇರೆ ಬೇರೆ ರಾಜ್ಯಗಳಲ್ಲಿ ಗೂಂಡಾಗಿರಿ ನಡೆಯುತ್ತದೆ ಎಂದು ಕೇಳಿದ್ದೆವು. ಈಗ ನಮ್ಮ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವಾಗ ಗೂಂಡಾಗಿರಿ ಮಾಡಲು ಹೋಗುತ್ತಿರುವುದು ಖಂಡನೀಯ ಎಂದು ಯಡಿಯೂರಪ್ಪ ದೂರಿದರು.

ಸುಧಾಕರ್ ಅವರ ಪತ್ನಿ ನನಗೆ ಫೋನ್ ಮಾಡಿ ತಮ್ಮ ಪತಿಯನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ನಾನು ಪೊಲೀಸ್ ಆಯುಕ್ತರು ಹಾಗೂ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. ಈ ಕೂಡಲೆ ಸುಧಾಕರ್‌ಗೆ ರಕ್ಷಣೆ ಒದಗಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News