ಆಸ್ತಿ ವಿವರ ಸಲ್ಲಿಸದ ವಿಚಾರ: ಮಾಹಿತಿ ನೀಡಲು ಹೈಕೋರ್ಟ್‌ಗೆ ಕಾಲಾವಕಾಶ ಕೇಳಿದ ಬಿಬಿಎಂಪಿ

Update: 2019-07-10 18:02 GMT

ಬೆಂಗಳೂರು, ಜು.10: ನಿಯಮದಂತೆ ಆಸ್ತಿ ಘೋಷಣೆ ಮಾಡಿಕೊಳ್ಳದ ಬಿಬಿಎಂಪಿಯ 34 ಸದಸ್ಯರನ್ನು ಅನರ್ಹಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಮಾಹಿತಿ ನೀಡಲು ಬಿಬಿಎಂಪಿ ಎರಡು ವಾರ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಜು.25ಕ್ಕೆ ವಿಚಾರಣೆ ಮುಂದೂಡಿಕೆ.

ಈ ಕುರಿತು ಸಾಮಾಜಿಕ ಹೋರಾಟಗಾರ ಕೆ.ಅನಿಲ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿ ಪರ ವಾದಿಸಿದ ವಕೀಲ ಎಂ.ಸಿ.ನಾಗಶ್ರೀ ಅವರು, ಆಸ್ತಿ ಘೋಷಣೆ ಮಾಡಿಕೊಳ್ಳದ ಬಿಬಿಎಂಪಿ ಸದಸ್ಯರ ಕುರಿತು ಮಾಹಿತಿ ನೀಡಲು ಎರಡು ವಾರ ಕಾಲಾವಕಾಶ ಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು.

ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯಿದೆ 1976ರ ಸೆಕ್ಷನ್ 19(1) ಅನ್ವಯ ಎಲ್ಲ ಬಿಬಿಎಂಪಿ ಸದಸ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ಪ್ರತಿ ವರ್ಷ ಮೇಯರ್‌ಗೆ ಸಲ್ಲಿಸಬೇಕು. ಆದರೆ, 34 ಸದಸ್ಯರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಈ ನಿಯಮ ಪಾಲಿಸದ ಸದಸ್ಯರನ್ನು ಆ ಸ್ಥಾನದಲ್ಲಿ ಮುಂದುವರಿಸಲು ಅನರ್ಹರಾಗುತ್ತಾರೆ. ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅವರ ಸ್ಥಾನದಲ್ಲಿ ಮುಂದುವರಿಸದಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬಿಬಿಎಂಪಿ ಪ್ರಾದೇಶಿಕ ಆಯುಕ್ತರು ಪರಿಗಣಿಸಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಅರ್ಜಿಯನ್ನು ಆಲಿಸುತ್ತಿರುವ ನ್ಯಾಯಪೀಠವು ಕಳೆದ ವಿಚಾರಣೆ ವೇಳೆ ಬಿಬಿಎಂಪಿಗೆ ಸದಸ್ಯರ ಕುರಿತು ವರದಿ ಸಲ್ಲಿಸಲು ಸೂಚಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News