ಇಂದು ಇಂಗ್ಲೆಂಡ್-ಆಸ್ಟ್ರೇಲಿಯ ಸೆಮಿಪೈನಲ್ ಹಣಾಹಣಿ

Update: 2019-07-11 03:49 GMT

ಬರ್ಮಿಂಗ್‌ಹ್ಯಾಮ್, ಜು.10: ಅತ್ಯಂತ ನಿರೀಕ್ಷಿತ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಆತಿಥೇಯ ಇಂಗ್ಲೆಂಡ್ ತಂಡ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಗುರುವಾರ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ರವಿವಾರ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ತನ್ನ ಅಭಿಮಾನಿಗಳ ಎದುರು ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಫೈನಲ್ ತಲುಪುವ ವಿಶ್ವಾಸದಲ್ಲಿದ್ದರೆ, ಆಸ್ಟ್ರೇಲಿಯ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಕಳೆದ 7 ಸೆಮಿ ಫೈನಲ್‌ಗಿಂತ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.

ಇಯಾನ್ ಮೋರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಸೆಮಿ ಫೈನಲ್‌ಗೆ ತಲುಪುವ ಮೊದಲು ಭಾರತ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಜಯ ಸಾಧಿಸಿ ಗಮನ ಸೆಳೆದಿತ್ತು. ಆದರೆ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಗ್ರೂಪ್ ಹಂತದಲ್ಲಿ ಸೋಲನುಭವಿಸಿ ನಿರಾಸೆ ಅನುಭವಿಸಿತ್ತು.

ಎರಡು ವಾರಗಳ ಹಿಂದೆ ಆಸ್ಟ್ರೇಲಿಯ ತಂಡ ಎಡಗೈ ವೇಗಿಗಳಾದ ಜೇಸನ್ ಬೆಹ್ರೆನ್‌ಡೋರ್ಫ್(5-44) ಹಾಗೂ ಮಿಚೆಲ್ ಸ್ಟಾರ್ಕ್(4-43) ಉತ್ತಮ ಬೌಲಿಂಗ್ ಬೆಂಬಲದಿಂದ ಇಂಗ್ಲೆಂಡ್ ಬ್ಯಾಟಿಂಗ್‌ಗೆ ಸವಾಲಾಗಿ ಪರಿಣಮಿಸಿತ್ತು. ಇಂಗ್ಲೆಂಡ್‌ನ್ನು 221 ರನ್‌ಗೆ ಆಲೌಟ್ ಮಾಡಿದ ಆಸೀಸ್ 64 ರನ್ ಗೆಲುವು ದಾಖಲಿಸಿತ್ತು.

 ಆ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಎರಡಂಕೆ ದಾಖಲಿಸಲು ವಿಫಲರಾಗಿ ಸ್ಟಾರ್ಕ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದಿದ್ದರು. ಸ್ಟಾರ್ಕ್ ಟೂರ್ನಮೆಂಟ್‌ನಲ್ಲಿ ಒಟ್ಟು 26 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಟಾಸ್ ನಿರ್ಣಾಯಕ

ಉಭಯ ತಂಡಗಳು ಟಾಸ್ ಜಯಿಸಲು ಇಷ್ಟಪಡುತ್ತಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಇದು ಹೆಚ್ಚು ಅನುಕೂಲವಾಗಿರುವುದು ಇದಕ್ಕೆ ಕಾರಣ.

ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ಸುದೀರ್ಘ ವೈರತ್ವವಿದೆ. 2015ರ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ಕೇವಲ 60 ರನ್‌ಗೆ ಆಲೌಟಾಗಿತ್ತು. ಆಗ ವೇಲ್ಸ್‌ನ ಒಂದು ಅಂಗಡಿ ಮಾಲಕ, ‘‘ಹೆಚ್ಚು ಬಳಕೆಯಾಗದ ಆಸ್ಟ್ರೇಲಿಯದ ಬ್ಯಾಟ್ ಮಾರಾಟಕ್ಕಿದೆ’ ಎಂದು ರಸ್ತೆ ಬದಿಯಲ್ಲಿ ಬೋರ್ಡ್‌ವೊಂದನ್ನು ಹಾಕಿದ್ದ. ಆದರೆ, ಗುರುವಾರದ ಪಂದ್ಯ ಮಾತ್ರ ಎಲ್ಲರ ಕುತೂಹಲ ಕೆರಳಿಸಿದೆ.

ಆರಂಭಿಕ ಆಟಗಾರರೇ ಮುಖ್ಯ

ಆರಂಭಿಕ ಆಟಗಾರರ ಪ್ರದರ್ಶನ ಫಲಿತಾಂಶ ನಿರ್ಧರಿಸಲು ಪ್ರಮುಖ ಪಾತ್ರವಹಿಸಲಿದೆ. ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 55ರ ಸರಾಸರಿಯಲ್ಲಿ ಆರಂಭಿಕ ಜೊತೆಯಾಟ ನಡೆಸಿದ್ದರು. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಕಳೆದ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.

29 ವರ್ಷಗಳ ಬಳಿಕ ಸೆಮಿಗೆ ತಲುಪಿರುವ ಇಂಗ್ಲೆಂಡ್

1992ರ ಬಳಿಕ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿರುವ ಇಂಗ್ಲೆಂಡ್, ಹಾಲಿ ಚಾಂಪಿಯನ್ ಆಸೀಸ್‌ನ್ನು ಮಣಿಸಿದರೆ 2015ರ ವಿಶ್ವಕಪ್ ಫೈನಲಿಸ್ಟ್ ನ್ಯೂಝಿಲ್ಯಾಂಡ್ ಸವಾಲನ್ನು ಎದುರಿಸಲಿದೆ. ಇಂಗ್ಲೆಂಡ್ ಇದೀಗ 6ನೇ ಸೆಮಿ ಫೈನಲ್ ಪಂದ್ಯವನ್ನಾಡಲಿದ್ದು, 1975, 1983ರಲ್ಲಿ ತನ್ನ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ಎಡವಿತ್ತು. ಇಂಗ್ಲೆಂಡ್ 1979ರಲ್ಲಿ ಫೈನಲ್‌ಗೆ ತಲುಪಿತ್ತು. 1987 ಹಾಗೂ 1992ರಲ್ಲಿ ವಿಶ್ವಕಪ್ ಆಯೋಜಿಸಿದ್ದ ಸಂದರ್ಭದಲ್ಲಿ ಕ್ರಮವಾಗಿ ವೆಸ್ಟ್‌ಇಂಡೀಸ್, ಆಸ್ಟ್ರೇಲಿಯ ಹಾಗೂ ಪಾಕ್ ವಿರುದ್ಧ ಸೋತಿತ್ತು. ಆದರೆ ಈ ಬಾರಿ ಇಂಗ್ಲೆಂಡ್ ಅಭಿಮಾನಿಗಳು ಏಕದಿನದ ನಂ.1 ತಂಡ ಇಂಗ್ಲೆಂಡ್‌ನಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂಗ್ಲೆಂಡ್ 2015ರ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿ ಹೀನಾಯ ಸೋಲನುಭವಿಸಿತ್ತು.

6ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಆಸೀಸ್

ಆಸ್ಟ್ರೇಲಿಯ 1987, 1999, 2003, 2007 ಹಾಗೂ 2015ರಲ್ಲಿ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡಿದೆ. ಇದೀಗ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ವರ್ಷದ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿ ಫೈನಲ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿದ್ದ ಆಸ್ಟ್ರೇಲಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೋಲನುಭವಿಸಿ ಗ್ರೂಪ್ ಹಂತದಲ್ಲಿ 2ನೇ ಸ್ಥಾನ ಪಡೆದಿತ್ತು.

ಪಂದ್ಯದ ಸಮಯ: ಅಪರಾಹ್ನ 3:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News