ಬಿಜೆಪಿ ‘ಅವಿಶ್ವಾಸ ನಿರ್ಣಯ' ಮಂಡಿಸಿದರೆ ಎದುರಿಸಲು ಸರಕಾರ ಸಿದ್ಧ: ಸಚಿವ ಕೃಷ್ಣಭೈರೇಗೌಡ

Update: 2019-07-11 11:55 GMT

ಬೆಂಗಳೂರು, ಜು. 11: ‘ವಿಪಕ್ಷ ಬಿಜೆಪಿಗೆ ವಿಶ್ವಾಸವಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ(ಜು.12)ಯಿಂದ ಅಧಿವೇಶನ ನಡೆಯಲಿದ್ದು, ಹಣಕಾಸು ಕಾಯ್ದೆ ಚರ್ಚೆ ಹಾಗೂ ಮತಕ್ಕೆ ಹಾಕಲು ವಿಪಕ್ಷ ಆಗ್ರಹಿಸಿದರೆ ಅದಕ್ಕೂ ಸಿದ್ಧ. ಒಂದು ವೇಳೆ ಅಲ್ಲಿ ನಮಗೆ ಬಹುಮತ ಸಿಗದಿದ್ದರೆ ಆಗ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಶಾಸಕರ ರಾಜೀನಾಮೆ ಸೇರಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮೈತ್ರಿ ಸರಕಾರ ಸಂದಿಗ್ಧ ಸ್ಥಿತಿಯಲ್ಲಿದ್ದು, ಪರಿಹಾರ ಕ್ರಮಗಳ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು ಎಂದು ಕೃಷ್ಣಬೈರೇಗೌಡ ಹೇಳಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರದ ವಿರುದ್ಧ ಆರೇಳು ಬಾರಿ ವಿಪಕ್ಷ ಬಿಜೆಪಿ ದಾಳಿ ನಡೆಸಿದ್ದು, ಕೇಂದ್ರ ಸರಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಮೆಟ್ಟಿ ನಿಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ ಕೃಷ್ಣಭೈರೇಗೌಡ, ಇದನ್ನು ಧೈರ್ಯವಾಗಿ ಎದುರಿಸಿ ನಿಲ್ಲುತ್ತೇವೆ ಎಂದು ನುಡಿದರು.

ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಶಾಸಕರ ಮನವೊಲಿಸಲಿದ್ದು, ಬಿಜೆಪಿಯ ಚಕ್ರವ್ಯೂಹವನ್ನು ಭೇದಿಸಲಿದ್ದೇವೆ ಎಂದ ಅವರು, ವಿಪಕ್ಷ ಬಿಜೆಪಿ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ಹೇಳುತ್ತಿದೆ. ಆದರೆ, ಅವರು ಅವಿಶ್ವಾಸ ಮಂಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದು, ಅವರು ಸರಕಾರಕ್ಕೆ ನೀಡುವ ಸಾಂವಿಧಾನಿಕವಾದ ಎಲ್ಲ ಸಲಹೆ-ಸೂಚನೆಗಳನ್ನು ಪಾಲಿಸಲು ಮೈತ್ರಿ ಸರಕಾರ ಬದ್ಧ ಎಂದ ಅವರು, ಸರಕಾರ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಬಾರದು ಎಂದು ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News