ಜೈಲಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಕೈದಿಗಳಿಗೆ ಕಾನೂನು ನೆರವು: ಜಿ.ಎ.ಬಾವಾ

Update: 2019-07-11 17:08 GMT

ಬೆಂಗಳೂರು, ಜು.11: ರಾಜ್ಯ ವ್ಯಾಪ್ತಿಯ ಜೈಲುಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಲ್ಪಸಂಖ್ಯಾತ ಸಮುದಾಯದ ಕೈದಿಗಳಿಗೆ ಕಾನೂನು ನೆರವು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದ್ದಾರೆ.

ಗುರುವಾರ ನಗರದ ಡಾ.ಅಂಬೇಡ್ಕರ್ ರಸ್ತೆಯ ವಿವಿ ಗೋಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಅಲ್ಪಸಂಖ್ಯಾತ ಸಮುದಾಯದ ಹಲವು ಮಂದಿ ಜೈಲಿನಲ್ಲಿದ್ದು, ಇವರಿಗೆ ಕಾನೂನು ನೆರವು ನೀಡಲು ನಿರ್ಧರಿಸಲಾಗಿದೆ ಎಂದರು.

ಇತ್ತೀಚಿಗೆ ಆಯೋಗದ ಸದಸ್ಯರ ತಂಡ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿತ್ತು. ಈ ವೇಳೆ, ಶೇಕಡ 30 ರಷ್ಟು ಕೈದಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಬಹಳಷ್ಟು ಮಂದಿ ಕಾನೂನು ಅರಿವು ಇಲ್ಲದೆ, ಜೈಲಿನಲ್ಲಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

ಜೈಲಿನಲ್ಲಿರುವ ಅನೇಕರು ಬಡತನದ ಕಾರಣದಿಂದ ಕಾನೂನು ಹೋರಾಟಕ್ಕೆ ಮುಂದಾಗಿಲ್ಲ. ಇನ್ನು ಕೆಲವರಿಗೆ, ಯಾವ ಪ್ರಕರಣದಲ್ಲಿ ಶಿಕ್ಷೆ ನೀಡಲಾಗಿದೆ ಎನ್ನುವ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಖಾಸಗಿ ಸ್ವಯಂ ಸೇವಾ ಸಂಘಟನೆಗಳ ಸಹಯೋಗದೊಂದಿಗೆ ಕಾನೂನು ನೆರವು ನೀಡಿ, ಇವರನ್ನು ಹೊರತರಲು ಉದ್ದೇಶಿಸಲಾಗಿದೆ ಎಂದು ಬಾವಾ ನುಡಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಕಾರಾಗೃಹಕ್ಕೆ ಅಲ್ಪಸಂಖ್ಯಾತರ ಆಯೋಗ ನೇತೃತ್ವದ ತಂಡ ಭೇಟಿ ನೀಡಿ ಕೈದಿಗಳ ಸಮಸ್ಯೆ ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ವಿಶ್ವಾಸ ವ್ಯಕ್ತಪಡಿಸಿದರು.

ಶ್ಯೂರಿಟಿ ಇಲ್ಲದೆ 23 ಮಂದಿ ಜೈಲಿನಲ್ಲಿ!

ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ, 23 ಮಂದಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆದರೆ, ಶ್ಯೂರಿಟಿ ಇಲ್ಲದ ಕಾರಣ, ಅವರು ಜೈಲಿನಲ್ಲಿಯೇ ಉಳಿಯುವಂತೆ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಮುಂದಿನ ದಿನಗಳಲ್ಲಿ ಆರ್ಥಿಕ ಸೌಲಭ್ಯ ಒದಗಿಸಲಾಗುವುದು.

-ಜಿ.ಎ.ಬಾವಾ, ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News