ಜು.15ರಿಂದ ದಾಳಿ, ಪ್ಲಾಸ್ಟಿಕ್ ಬಳಕೆಗೆ ಕಾರಣರಾದವರ ವಿರುದ್ಧ ಕ್ರಮ: ಮೇಯರ್ ಗಂಗಾಂಬಿಕೆ

Update: 2019-07-11 17:22 GMT

ಬೆಂಗಳೂರು, ಜು.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಲಯಗಳಲ್ಲೂ ಜುಲೈ 15ರಿಂದ ಏಕಕಾಲಕ್ಕೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು. ಅಲ್ಲದೇ ಇದರ ಬಳಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಜಯನಗರದ ಕಮ್ಯೂನಿಟಿ ಶಾಲೆ ಸಭಾಂಗಣದಲ್ಲಿ ನಡೆದ ಪ್ಲಾಸ್ಟಿಕ್ ಬಳಕೆ ಕಸ ವಿಗಂಡನೆ, ಮಣ್ಣಿನ ಗಣೇಶ ಮೂರ್ತಿ ಬಳಕೆ ಹಾಗೂ ನೀರು ಪೋಲು ಮಾಡದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಪ್ಲಾಸ್ಟಿಕ್ ಅನ್ನು ಬಳಸದಂತೆ ಬಿಬಿಎಂಪಿ ಈಗಾಗಲೇ ಅಂಗಡಿ ಹೊಟೇಲ್ ಮಾಲಕರು ಹಾಗೂ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರೊಂದಿಗೆ ಗ್ರಾಹಕರಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿನ 156 ಕೆರೆಗಳಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರೆ ಕೆರೆ ಮಲಿನವಾಗಲಿದೆ. ನಾಗರಿಕರಲ್ಲಿ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಇರಬೇಕು. ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ, ದಕ್ಷಿಣ ವಲಯದಲ್ಲಿ ಜಾಥಾ ಎಲ್ಲಿ ನಡೆಯಬೇಕು ಎಂಬ ಬಗ್ಗೆ ನಕ್ಷೆ ಸಿದ್ಧಪಡಿಸುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ. ಈ ಸಂಬಂಧ ನಾಮಫಲಕಗಳನ್ನು ವಿದ್ಯಾರ್ಥಿಗಳಿಗೆ ಜಾಥಾ ವೇಳೆ ವಿತರಿಸಲಾಗುವುದು ಎಂದು ತಿಳಿಸಿದರು.

ಇನ್ನು, ಪ್ಲಾಸ್ಟಿಕ್ ಅನ್ನು ಬಳಸದಂತೆ ಹಸಿ ಕಸ ಮತ್ತು ಒಣ ಕಸಗಳನ್ನು ವಿಂಗಡಿಸುವಂತೆ, ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ಪಿಓಪಿ ಗಣೇಶ ಮೂರ್ತಿಯ ಬದಲು ಮಣ್ಣಿನ ಗಣಪತಿಗಳನ್ನೇ ಬಳಸುವಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ದಕ್ಷಿಣ ವಲಯದ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರಿಗೆ ಮೇಯರ್ ಮನವಿ ಮಾಡಿದರು.

ಕಮ್ಯೂನಿಟಿ ಶಾಲೆಯ ಮುಖ್ಯಸ್ಥ ಕೆ.ಎಂ.ನಾಗರಾಜ್ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳುವಳಿಕೆ ಹೊಂದಿರಬೇಕು ಎಂದು ಮನವಿ ಮಾಡಿದರು. ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತ ವಿಶ್ವನಾಥ್, ಉಪ ಆಯುಕ್ತೆ ಲಕ್ಷ್ಮೀದೇವಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಕಸ ವಿಂಗಡನೆ ಕಡ್ಡಾಯ

ನಗರದಲ್ಲಿ ಪ್ರತಿನಿತ್ಯ 5,700 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಆದರೆ ಹಸಿ ಮತ್ತು ಒಣ ಕಸ ಸರಿಯಾಗಿ ವಿಂಗಡನೆಯಾಗದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೆಪ್ಟೆಂಬರ್1 ರಿಂದ ಹಸಿ ಮತ್ತು ಒಣ ಕಸ ವಿಂಗಡಿಸುವಂತೆ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಇದರ ಮೇಲ್ವಿಚಾರಣೆಗಾಗಿ 233 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಕಸ ವಿಂಗಡನೆ ಸಮರ್ಪಕವಾಗದಿದ್ದಲ್ಲಿ ಸಂಬಂಧಪಟ್ಟ ಮನೆ ಮಾಲಕರಿಗೆ ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಒಂದರಿಂದ 5 ಪಟ್ಟು ಹೆಚ್ಚಿಸಲಾಗುವುದು. ಕಸ ವಿಲೇವಾರಿಗಾಗಿ ಹೊಸ ಟೆಂಡರ್ ಅನ್ನು ಕರೆಯಲಾಗುತ್ತಿದೆ ಎಂದು ಮೇಯರ್ ತಿಳಿಸಿದ್ದಾರೆ.

ಬಿಬಿಎಂಪಿ ವತಿಯಿಂದ ಎಲ್ಲ ವಲಯದಲ್ಲೂ ಜಾಗೃತಿ ಜಾಥಾವನ್ನು ಆಯೋಜಿಸಲಾಗಿದ್ದು, ಪಾಲಿಕೆಯ 20 ಹಾಗೂ ಖಾಸಗಿಯ 120 ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಕ್ಕಳನ್ನು ಜಾಥಾದಲ್ಲಿ ಕರೆತಂದು ಪ್ಲಾಸ್ಟಿಕ್, ಕಸ, ಪರಿಸರ ವಿಷಯಗಳಲ್ಲಿ ಜಾಗೃತಿ ಮೂಡಿಸಬೇಕು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News