ಮನೆಗಳ್ಳತನ ಪ್ರಕರಣ: ಐವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಆಭರಣ ಜಪ್ತಿ

Update: 2019-07-11 17:49 GMT

ಬೆಂಗಳೂರು, ಜು.11: ಮನೆಗಳ್ಳತನ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಿರುವ ವಿಜಯನಗರ ಉಪವಿಭಾಗದ ಪೊಲೀಸರು, 42.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವೇಶ್ವರ ನಗರ: ರಾತ್ರಿ ವೇಳೆ ಕನ್ನಗಳವು ಮಾಡುತ್ತಿದ್ದ ಆರೋಪದಡಿ ಮಹೇಶ್ ಹಾಗೂ ದಯಾನಂದ್ ಎಂಬುವರನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇವರ ಬಂಧನದಿಂದ ಬಸವೇಶ್ವರನಗರ, ಬ್ಯಾಡರಹಳ್ಳಿ ಸೇರಿದಂತೆ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಐಷಾರಾಮಿ ಜೀವನ ನಡೆಸುವ ಸಲುವಾಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ನಾಗೇಶ್(33) ಹಾಗೂ ಹೇಮರಾಜು(34) ಎಂಬುವರನ್ನು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ 82 ಗ್ರಾಂ ತೂಕದ ಆಭರಣ ವಶಕ್ಕೆ ಪಡೆಯಲಾಗಿದೆ.

ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಕಳವು ಮಾಡುತ್ತಿದ್ದ ಆರೋಪದಡಿ ಪ್ರಕಾಶ್ ಎಂಬಾತನನ್ನು ಬಂಧಿಸಿರುವ ವಿಜಯನಗರ ಠಾಣಾ ಪೊಲೀಸರು, ಈತನಿಂದ 20 ಲಕ್ಷ ರೂ. ಮೌಲ್ಯದ 833 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News