ಡಿಸಿ ವಿಜಯಶಂಕರ್ ವಿರುದ್ಧದ ಪ್ರಕರಣ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-07-11 18:07 GMT
ಡಿಸಿ ವಿಜಯಶಂಕರ್

ಬೆಂಗಳೂರು, ಜು.11: ಐಎಂಎ ಸಂಸ್ಥೆ ವಂಚನೆ ಪ್ರಕರಣ ಸಂಬಂಧ ಲಂಚ ಪಡೆದ ಆರೋಪದಲ್ಲಿ ತಮ್ಮ ವಿರುದ್ಧ ಎಸ್‌ಐಟಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ, ರಾಜ್ಯ ಸರಕಾರ, ಸಿಬಿಐ, ಎಸ್‌ಐಟಿ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿದೆ.

ಐಎಂಎ ಕಂಪೆನಿ ಮಾಲಕ ಮುಹಮ್ಮದ್ ಮನ್ಸೂರ್ ಪರವಾಗಿ ವರದಿ ನೀಡಲು 1.5 ಕೋಟಿ ರೂ. ಲಂಚ ಪಡೆದ ಆರೋಪದಡಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ವಿಜಯಶಂಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಐಎಂಎ ಪ್ರಕರಣದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಜಾಗೊಳಿಸಬೇಕು. ಅಧೀನ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣದ ವಿಚಾರಣೆ ರದ್ದು ಮಾಡಬೇಕು. ಐಎಂಎ ಸಂಸ್ಥೆ ವಂಚನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ಸಿಬಿಐಗೆ ವಹಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಐಎಂಎ ಸಂಸ್ಥೆ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಈಗಾಗಲೇ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಮೂರು ಅರ್ಜಿಗಳು ಬಂದಿವೆ. ಹೀಗಾಗಿ, ಈ ಅರ್ಜಿಯನ್ನೂ ಅಲ್ಲಿಗೆ ವರ್ಗಾಯಿಸಬಹುದೆಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ವಿಭಾಗೀಯ ಪೀಠದ ಎದುರು ಈ ಅರ್ಜಿಯನ್ನು ವರ್ಗಾಯಿಸುವ ಕುರಿತು ಮನವಿ ಮಾಡಿಕೊಳ್ಳಲು ಸರಕಾರ, ಅರ್ಜಿದಾರರಿಗೆ ಒಂದು ವಾರ ಕಾಲಾವಕಾಶ ನೀಡಿತು. ಅಲ್ಲದೆ, ಕೇಂದ್ರ, ರಾಜ್ಯ ಸರಕಾರ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

ಐಎಂಎ ಕಂಪೆನಿ ಮಾಲಕ ಮನ್ಸೂರ್ ಪರ ಸರಕಾರಕ್ಕೆ ವರದಿ ನೀಡಲು ಬಂಧಿತನಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ 1.5 ಕೋಟಿ ರೂ.ಲಂಚ ಪಡೆದಿದ್ದರು. ಈ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮನ್ಸೂರ್‌ನಿಂದ ಹಣ ತೆಗೆದುಕೊಂಡು ಜಮೀನು ಖರೀದಿಸಲು ಬಿಲ್ಡರ್ ಕೃಷ್ಣಮೂರ್ತಿ ಎಂಬುವರಿಗೆ 1.5 ಕೋಟಿ ರೂ.ಹಣ ನೀಡಿದ್ದರು ಎಂಬ ವಿಚಾರ ಬಯಲಾಗಿತ್ತು.

ಕಳೆದ ವಾರ ಉಪವಿಭಾಗಾಧಿಕಾರಿ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಜಿಲ್ಲಾಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News