ಬೆಂಗಳೂರಿನಲ್ಲಿ ಹೈಟೆನ್ಷನ್ ಮಾರ್ಗದಡಿ 7,753 ಕಟ್ಟಡಗಳ ನಿರ್ಮಾಣ !

Update: 2019-07-11 18:23 GMT

ಬೆಂಗಳೂರು, ಜು.11: ನಗರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿರುವ ಮಾರ್ಗದಡಿಯಲ್ಲಿ 7,753 ಕಟ್ಟಡಗಳು ನಿರ್ಮಾಣಗೊಂಡಿರುವುದು ಬಯಲಾಗಿದ್ದು, ಅಲ್ಲಿರುವ ಜನರನ್ನು ಸ್ಥಳಾಂತರ ಮಾಡಿ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಪಾಲಿಕೆಗೆ ಸೂಚಿಸಿದೆ.

ಬೆಂಗಳೂರು ನಗರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ತಗುಲಿ ಪ್ರಾಣ ಬಿಡುತ್ತಿರುವ ಪ್ರಕರಣಗಳು ಮರುಕಳಿಸುತ್ತಿರುವ ಸಂದರ್ಭದಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಹೀಗಾಗಿ, ಬೆಸ್ಕಾಂ, ಕೆಪಿಟಿಸಿಎಲ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಸರ್ವೆ ನಡೆಸಿ ವಿದ್ಯುತ್ ತಂತಿಗಳು ಹಾದು ಹೋಗಿರುವ ಮಾರ್ಗದಡಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿ ವರದಿ ನೀಡುವಂತೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇ ನಲ್ಲಿ ಸಭೆ ನಡೆಸಿ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಸರ್ವೆ ನಡೆಸಿ ಸಲ್ಲಿಸಿರುವ ವರದಿಯ ಅನ್ವಯ 7,753 ಕಟ್ಟಡಗಳನ್ನು ಗುರುತಿಸಿದ್ದು, ಅವುಗಳಲ್ಲಿ ಈಗಾಗಲೇ 2,966 ಕಟ್ಟಡ ಮಾಲಕರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಪಾಲಿಕೆಗೆ ಪತ್ರ ಬರೆದು, ವಿದ್ಯುತ್ ಮಾರ್ಗದಡಿಯ ಕಟ್ಟಡಗಳಲ್ಲಿ ನೆಲೆಸಿರುವವರನ್ನು ಸ್ಥಳಾಂತರಿಸಿ, ಆ ಕಟ್ಟಡಗಳನ್ನು ತೆರವು ಮಾಡಿ ಎಂದು ಸಲಹೆ ನೀಡಿದ್ದಾರೆ.

ರಾಜರಾಜೇಶ್ವರಿನಗರ ಮತ್ತು ಮಹದೇವಪುರ ವಲಯದಲ್ಲಿ ನಿಯಮ ಉಲ್ಲಂಘಿಸಿ ವಿದ್ಯುತ್ ತಂತಿಗಳು ಹಾದು ಹೋಗಿರುವ ಮಾರ್ಗದಡಿ ಅತಿ ಹೆಚ್ಚು ಮನೆಗಳನ್ನು ನಿರ್ಮಿಸಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಕೆಲ ಪ್ರದೇಶಗಳಲ್ಲಿ ಹಲವಾರು ವರ್ಷಗಳ ಹಿಂದೆಯೇ ಮನೆಗಳನ್ನು ನಿರ್ಮಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಮಾರ್ಗ ಹಾದು ಹೋದ ಬಳಿಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡಗಳ ಮಾಲಕರಿಗೆ ಹಲವು ಸಲ ನೋಟಿಸ್ ನೀಡಿದ್ದರೂ, ಮನೆಗಳನ್ನು ಖಾಲಿ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯಮ ಏನು ಹೇಳುತ್ತದೆ?: 66 ಕೆ.ವಿ ವಿದ್ಯುತ್ ಮಾರ್ಗ ಮತ್ತು ಕಟ್ಟಡದ ನಡುವೆ 4 ಮೀಟರ್ ಎತ್ತರ, 2.3 ಮೀಟರ್ ಅಗಲದಷ್ಟು ಅಂತರ ಕಾಯ್ದುಕೊಳ್ಳಬೇಕಿದೆ. ಹಾಗೆಯೇ, 220 ಕೆ.ವಿ ವಿದ್ಯುತ್ ತಂತಿಗಳಿರುವೆಡೆ 5.5 ಮೀ ಎತ್ತರ ಮತ್ತು 3.8 ಅಗಲದಷ್ಟು ಅಂತರದಲ್ಲಿ ಕಟ್ಟಡಗಳಿರಬೇಕು. ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎಂದು ವರದಿಯ ಅಂಕಿ ಅಂಶಗಳು ಬೆಳಕು ಚೆಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News