ಬೈರತಿ ಬಸವರಾಜು ರಾಜೀನಾಮೆ ಖಂಡಿಸಿ ಪ್ರತಿಭಟನೆ

Update: 2019-07-12 17:31 GMT

ಬೆಂಗಳೂರು, ಜು.12: ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆ ನೀಡಿರುವ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೈರತಿ ಬಸವರಾಜು ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೂಡಲೇ ರಾಜೀನಾಮೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಶಾಸಕರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವುದು ಸರಿಯಲ್ಲ. ಅವರನ್ನು ಬೆಂಬಲಿಸಿ ಸಾವಿರಾರು ಜನರು ದುಡಿದಿದ್ದಾರೆ. ಅವರಿಗೆ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುತ್ತಿಲ್ಲ ಎಂದರೆ ವಿಧಾನಸೌಧದ ಬಳಿ ಧರಣಿ, ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಬೇರೆ ಪಕ್ಷದವರೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಅವಮಾನಕರ ಸಂಗತಿ ಎಂದು ಪಕ್ಷದ ಕಾರ್ಯಕರ್ತರು ದೂರಿದರು.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಮೂಲ ಕಾಂಗ್ರೆಸಿಗರಿದ್ದಾರೆ. ಕಾಂಗ್ರೆಸ್ ಪಕ್ಷ ಯಾರೋ ಒಬ್ಬರಿಂದ ಬೆಳೆದಿಲ್ಲ, ಪಕ್ಷದಿಂದಲೇ ಎಲ್ಲರೂ ಬೆಳೆದಿರುವುದು ಎಂಬುದನ್ನು ಬೈರತಿ ಬಸವರಾಜು ಅರಿತುಕೊಳ್ಳಬೇಕು ಎಂದು ಕಾರ್ಯಕರ್ತರು ಸಲಹೆ ನೀಡಿದರು.

ಬಿಜೆಪಿಯವರು ನಮಗೇನು ಸಂಬಂಧವಿಲ್ಲ ಎಂದು ಹೇಳುತ್ತಾ ನಾಟಕವಾಡುತ್ತಿದ್ದಾರೆ. ಆದರೆ, ಮೈತ್ರಿ ಸರಕಾರದ ವಿರುದ್ಧದ ಅತೃಪ್ತ ಶಾಸಕರು ಮುಂಬೈಗೆ ಹೋಗಲು ಬರಲು ಜತೆಯಲ್ಲಿದ್ದುಕೊಂಡೇ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಕೆ.ಆರ್.ಪುರಂನ ವಿವಿಧ ವಲಯದ ನಾಯಕರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News