ರಾಜಧಾನಿಯ ವಾಯು ಶುದ್ಧೀಕರಣಕ್ಕೆ ಬಿಬಿಎಂಪಿ ತೀರ್ಮಾನ; 500 ವಾಯು ಶುದ್ಧೀಕರಣ ಯಂತ್ರ ಅಳವಡಿಕೆ

Update: 2019-07-12 17:38 GMT

ಬೆಂಗಳೂರು, ಜು.12: ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ನಗರದ ಪ್ರಮುಖ 500 ಜಂಕ್ಷನ್‌ಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು ತೀರ್ಮಾನಿಸಿದೆ.

ಎ ಟೆಕ್ ಟ್ರೊನ್ ಎಂಬ ಕಂಪೆನಿಯು ಹಡ್ಸನ್ ವೃತ್ತದಲ್ಲಿ ಫೆ.28ರಂದು ಪ್ರಾಯೋಗಿಕವಾಗಿ ವಾಯು ಶುದ್ಧೀಕರಣ ಯಂತ್ರ ಅಳವಡಿಸಿದ್ದು, ಇದರಿಂದ ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅದೇ ಕಂಪನಿಗೆ ವಾಹನ ದಟ್ಟಣೆ ಹೆಚ್ಚಿರುವ 500 ಜಂಕ್ಷನ್‌ಗಳಲ್ಲಿ ಯಂತ್ರಗಳ ಅಳವಡಿಕೆಗೆ ಅನುಮತಿ ನೀಡಲು ಬಿಬಿಎಂಪಿ ಸಮ್ಮತಿಸಿದೆ.

ವಾಯು ಶುದ್ಧೀಕರಣ ಯಂತ್ರ ಅಳವಡಿಕೆಗೆ ಪಾಲಿಕೆಯಿಂದ ನಯಾಪೈಸೆ ವೆಚ್ಚ ಮಾಡುತ್ತಿಲ್ಲ. ಬದಲಿಗೆ ಎ ಟೆಕ್ ಟ್ರೊನ್ ಕಂಪೆನಿಯೇ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಬಳಸಿಕೊಂಡು ಯಂತ್ರಗಳನ್ನು ಅಳವಡಿಕೆ ಮಾಡಲಿದೆ. ಆದರೆ, ವಾಣಿಜ್ಯ ಜಾಹೀರಾತಿಗೆ ಅವಕಾಶವಿರುವುದಿಲ್ಲ. ಈಗಾಗಲೇ ಕಂಪೆನಿಯು ಮಾಲಿನ್ಯ ಪ್ರಮಾಣ ಜಾಸ್ತಿ ಇರುವ ಜಂಕ್ಷನ್‌ಗಳನ್ನು ಗುರುತಿಸಿದೆ.

ನಗರದ ಹಲವು ಪ್ರದೇಶಗಳಲ್ಲಿ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳ ಪ್ರಮಾಣವು ಮಿತಿ ಮೀರಿದೆ. ಮೆಟ್ರೊ, ಚರಂಡಿ, ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣವು ಜಾಸ್ತಿಯಾಗಿದ್ದು, ಉಸಿರಾಡಲು ಅಂಜುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಯಂತ್ರದಲ್ಲಿ ಸಂಗ್ರಹವಾಗಿದ್ದ ಒಂದೂವರೆ ಕೆ.ಜಿ ಯಷ್ಟು ಧೂಳನ್ನು ಎರಡು ಸಲ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಪಿಎಂ 10 ಮತ್ತು ಪಿಎಂ 2.5 ಪ್ರಮಾಣವು ಹೆಚ್ಚಿರುವುದು ಕಂಡು ಬಂದಿದೆ. ಯಂತ್ರವು ಒಂದು ನಿಮಿಷಕ್ಕೆ 3,500 ಕ್ಯೂಬಿಕ್ ಗಾಳಿಯನ್ನು ಹೀರಿಕೊಂಡು ಶುದ್ಧೀಕರಿಸುತ್ತದೆ. ಈ ಯಂತ್ರದಿಂದ ಯಾವುದೇ ರೀತಿಯ ಶಬ್ದಮಾಲಿನ್ಯ ಇರುವುದಿಲ್ಲ ಎಂದು ಎ ಟೆಕ್ ಟ್ರೊನ್ ಸಂಸ್ಥೆಯ ಸಂಸ್ಥಾಪಕ ರಾಜೀವ್ ಕೃಷ್ಣ ತಿಳಿಸಿದರು.

ಒಂದು ತಿಂಗಳ ಬಳಿಕ ಯಂತ್ರಗಳನ್ನು ಅಳವಡಿಸುವ ಕೆಲಸವನ್ನು ಆರಂಭಿಸಲಾಗುವುದು. ಈಗಾಗಲೇ ಸಿಎಸ್‌ಆರ್ ನಿಧಿ ಕೋರಿ 10 ಕಂಪನಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದು ವರ್ಷದಲ್ಲಿ ಯಂತ್ರಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಯಂತ್ರದ ಬೆಲೆಯು 2 ಲಕ್ಷ ರೂ. ನಿಂದ 10 ಲಕ್ಷ ರೂ. ಇದೆ ಎಂದು ಮಾಹಿತಿ ನೀಡಿದರು.

ವಾಯು ಶುದ್ಧೀಕರಣ ಯಂತ್ರವು ವಾತಾವರಣದಲ್ಲಿ ಬೆರೆತು ಹೋಗಿರುವ ಧೂಳಿನ ಕಣ, ಹೊಗೆಯನ್ನೆಲ್ಲಾ ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಬಿಡುತ್ತದೆ. ಆರು ಹಂತದಲ್ಲಿ ಗಾಳಿಯನ್ನು ಸೋಸುತ್ತದೆ. ಒಂದೊಂದು ಶೋಧಕವೂ (ಫಿಲ್ಟರ್) ಮಾಲಿನ್ಯಕಾರಕಗಳನ್ನು ಹಂತ ಹಂತವಾಗಿ ಸೋಸುತ್ತದೆ. ಕೊನೆಗೆ ಯಂತ್ರದ ತಳಭಾಗದಿಂದ ಶುದ್ಧ ಗಾಳಿ ಹೊರ ಬರುತ್ತದೆ.
-ರಾಜೀವ್ ಕೃಷ್ಣ, ಎ ಟೆಕ್ ಟ್ರೊನ್ ಸಂಸ್ಥೆಯ ಸಂಸ್ಥಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News