ಸಾಂಕ್ರಾಮಿಕ ರೋಗ ತಡೆಯಲು ಬಿಬಿಎಂಪಿ ಮುನ್ನೆಚ್ಚರಿಕೆ: ಮೇಯರ್ ಗಂಗಾಂಬಿಕೆ

Update: 2019-07-12 17:41 GMT

ಬೆಂಗಳೂರು, ಜು.12: ನಗರದಲ್ಲಿ ಡೆಂಗ್ಯು, ಚಿಕನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು 8 ವಲಯಗಳಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಶುಕ್ರವಾರ ನಗರದ ಬಸವನಗುಡಿ ಕೃಷ್ಣರಾವ್ ಉದ್ಯಾನದ ಬಳಿ ಏರ್ಪಡಿಸಿದ್ದ ಡೆಂಗ್ಯು, ಚಿಕನ್‌ಗುನ್ಯಾ ಸಾಂಕ್ರಾಮಿಕ ರೋಗಗಳ ಕುರಿತ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ ವತಿಯಿಂದ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಅದರ ಜತೆಗೆ ಶಾಲಾ ಮಕ್ಕಳು ಕೂಡಾ ಕೈಜೋಡಿಸಿದರೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬಹುದು ಎಂದು ಹೇಳಿದರು.

ಸಾಂಕ್ರಾಮಿಕ ರೋಗಗಳ ತಡೆಗೆ ನಾಗರಿಕರು ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಎಲ್ಲ ವಾರ್ಡ್‌ಗಳ ಮನೆ-ಮನೆಗೆ ತೆರಳಿ ಭಿತ್ತಿಪತ್ರ ಹಂಚುತ್ತಿದ್ದಾರೆ. ಅದರ ಜತೆಗೆ ಎಲ್ಲ ಎಂಟು ವಲಯಗಳಲ್ಲೂ ಶಾಲಾ ಮಕ್ಕಳ ಸಹಯೋಗದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಜಾಥಾ ಕಾರ್ಯಕ್ರಮದ ವೇಳೆ ಜಾಗೃತಿ ಮೂಡಿಸುವ ನಾಮಫಲಕಗಳು ಹಾಗೂ ಭಿತ್ತಿಪತ್ರ ಹಂಚಿಕೆ ಮಾಡಿದಾಗ ಜನರಲ್ಲಿ ಜಾಗೃತಿ ಮೂಡುತ್ತದೆ. ಆಗ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದಾಗಿದೆ. ಅಲ್ಲದೆ ಮಕ್ಕಳಿಗೆ ಎಲ್ಲವೂ ಅರಿತುಕೊಳ್ಳುವ ಜ್ಞಾನ ಇರುತ್ತದೆ. ಅಲ್ಲದೆ, ಸಾರ್ವಜನಿಕರಿಗೆೆ ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದನ್ನು ಸ್ವಚ್ಛಗೊಳಿಸಿ ಎಂದು ಮನವರಿಕೆ ಮಾಡಿದರೆ ಎಲ್ಲರೂ ಕೇಳುತ್ತಾರೆ ಎಂದರು.

ಈಡೀಸ್, ಈಜಿಪ್ಟೈ ಎಂಬ ಸೊಳ್ಳೆ ಕಡಿತದಿಂದಾಗಿ ಡೆಂಗ್ಯು ಜ್ವರ ಬರುತ್ತದೆ. ಆ ಸೊಳ್ಳೆಗಳು ತೆರೆಡಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್‌ಗಳು, ಹೂವಿನ ಕುಂಡದ ತಟ್ಟೆಗಳು, ಬಕೆಟ್‌ಗಳು, ಸೀಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಒಡೆದ ಟೈರ್‌ಗಳಲ್ಲಿ ಉತ್ಪತ್ತಿಯಾಗುತ್ತವೆ. ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆಗಳು ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ ಎಂದು ಮಾಹಿತಿ ನೀಡಿದರು.

ಇನ್ನು, ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲದೆ, ನೀರು ನಿಂತಿರುವ ಜಾಗವಿದ್ದಲ್ಲಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವಂತೆ ನಿಮ್ಮ ಪೋಷಕರಿಗೆ ತಿಳಿಸಿ. ಆಗ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟು ಸೊಳ್ಳೆಗಳ ಉತ್ಪತ್ತಿ ತಾಣದ ಬಳಿ ಫಾಗಿಂಗ್ ಮತ್ತು ಔಷಧಿ ಸಿಂಪಡಿಸುತ್ತಾರೆ ಎಂದು ತಿಳಿಸಿದರು.
ಜಾಥಾದಲ್ಲಿ ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳು, ಹಿರಿಯ ಆರೋಗ್ಯ ಪರಿವೀಕ್ಷಕರು, ಆಶಾ ಕಾರ್ಯಕರ್ತೆಯರು, ಕ್ರೆಸೆಂಟ್, ಈಸ್ಟ್- ವೆಸ್ಟ್ ಸ್ಕೂಲ್ ಮಕ್ಕಳು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News