ರಾಜಾಜಿನಗರದ ರಸ್ತೆಯೊಂದಕ್ಕೆ ಆಚಾರ್ಯ ಮಹಾಶ್ರವಣ್ ಹೆಸರಿಡಲು ವಿರೋಧ

Update: 2019-07-12 17:47 GMT

ಬೆಂಗಳೂರು, ಜು.12: ರಾಜಾಜಿನಗರದ ರಸ್ತೆಯೊಂದಕ್ಕೆ ಆಚಾರ್ಯ ಮಹಾಶ್ರಮಣ್ ರಸ್ತೆ ಎಂದು ನಾಮಕರಣ ಮಾಡುವುದಕ್ಕೆ ಕರ್ನಾಟಕ ಕನ್ನಡ ಕಹಳೆ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ರಾಜಾಜಿನಗರದ ಮೂರನೆ ಬ್ಲಾಕ್‌ನ 42 ನೆ ಅಡ್ಡರಸ್ತೆಗೆ ಆಚಾರ್ಯ ಮಹಾಶ್ರವಣ್ ರಸ್ತೆ ಎಂದು ಮರು ನಾಮಕರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಕವಿಗಳು, ಕಲಾವಿದರು, ಸಂತರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಸೇರಿದಂತೆ ಅನೇಕ ಗಣ್ಯರು ಇಲ್ಲಿದ್ದಾರೆ. ಕೇವಲ ವೋಟ್ ಬ್ಯಾಂಕ್‌ಗಾಗಿ ಒಂದು ಭಾಷೆಯ ಓಲೈಕೆಗಾಗಿ ಗುಜರಾತಿಯವರಾದ ಆಚಾರ್ಯ ಮಹಾಶ್ರವಣ್ ಹೆಸರು ನಾಮಕರಣ ಮಾಡುವುದು ಸರಿಯಲ್ಲ ಎಂದು ಕಹಳೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಆಚಾರ್ಯ ಮಹಾಶ್ರವಣ್ ಹೆಸರಿನ ಬದಲಿಗೆ ನಾಡಿನ ಗಣ್ಯರಾದ ಸಂಪಂಗಿರಾಮ ಶೆಟ್ಟರು, ಚಳುವಳಿ ಆನಂದ್, ಅ.ನ.ನರಸಿಂಹಸ್ವಾಮಿ, ಬಸವರಾಧ್ಯ ಸೇರಿದಂತೆ ಹಲವರಿದ್ದಾರೆ. ಅವರ ಹೆಸರನ್ನು ಒಂದೊಂದು ರಸ್ತೆಗೆ ನಾಮಕರಣ ಮಾಡಬೇಕು ಎಂದು ರಾಜಾಜಿನಗರ ಕನ್ನಡ ಸಂಘದ ಅಧ್ಯಕ್ಷ ಎಂ.ರಾಮಸ್ವಾಮಿ ಒತ್ತಾಯಿಸಿದ್ದಾರೆ.

ಬಿಬಿಎಂಪಿಯು ನಗರದಲ್ಲಿರುವ ರಸ್ತೆಗಳಿಗೆ ರಾಜ್ಯದಲ್ಲಿ ನಾಡು-ನುಡಿಗೆ ಶ್ರಮಿಸಿದವರ ಹೆಸರುಗಳನ್ನೇ ಇಡಬೇಕು. ಹೊರರಾಜ್ಯದಲ್ಲಿಯೂ ಅಪಾರವಾದ ಸೇವೆ ಸಲ್ಲಿಸಿದವರ ಸ್ಮರಣಾರ್ಥ ಹೆಸರಿಡಬೇಕು ಎಂದ ಅವರು, ರಸ್ತೆಗೆ ಹೆಸರಿಟ್ಟ ಬಳಿಕ ಉದ್ಘಾಟನೆಗೂ ಮುನ್ನ ಸ್ಥಳೀಯರಿಗೆ ತಿಳಿಯುವಂತೆ ನಾಮಫಲಕ ಹಾಕಿರಬೇಕು. ಆಗ ಯಾವುದೇ ರೀತಿಯ ವಿರೋಧಗಳು ವ್ಯಕ್ತವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News