ವಿಶ್ವಕಪ್ ಪೈನಲ್ ಪಂದ್ಯಕ್ಕೆ ಧರ್ಮಸೇನ, ಎರಾಸ್ಮಸ್ ಅಂಪೈರ್

Update: 2019-07-12 18:56 GMT

ಲಂಡನ್, ಜು.12: ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ಮಧ್ಯೆ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನ ಹಾಗೂ ದಕ್ಷಿಣ ಆಫ್ರಿಕದ ಮರಾಯಿಸ್ ಎರಾಸ್ಮಸ್ ಆನ್‌ಫೀಲ್ಡ್ ಅಂಪೈರ್‌ಗಳಾಗಿ ಶುಕ್ರವಾರ ನೇಮಕಗೊಂಡಿದ್ದಾರೆ.

ಆಸ್ಟ್ರೇಲಿಯದ ರಾಡ್ ಟಕರ್ ಹಾಗೂ ಪಾಕಿಸ್ತಾನದ ಅಲೀಮ್ ದರ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವ ಹಿಸಲಿದ್ದಾರೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಶ್ರೀಲಂಕಾದ ರಂಜನ್ ುದುಗಲ್ಲೆ ಮ್ಯಾಚ್ ರೆಫರಿ ಆಗಿ ತನ್ನ ಕರ್ತವ್ಯ ನಿರ್ವಹಿಸಲಿದ್ದಾರೆ.

ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿರುವ ಎಲ್ಲ ಅಧಿಕಾರಿಗಳು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ಮಧ್ಯೆ ನಡೆದ 2ನೇ ಸೆಮಿ ಫೈನಲ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಗುರುವಾರ ನಡೆದಿದ್ದ 2ನೇ ಸೆಮಿ ಫೈನಲ್ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಧರ್ಮಸೇನ 2ನೇ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜೇಸನ್ ರಾಯ್ ವಿರುದ್ಧ ವಿವಾದಾಸ್ಪದ ತೀರ್ಪು ನೀಡಿದ್ದರು. ಶತಕದ ಹಾದಿಯಲ್ಲಿದ್ದ ರಾಯ್(85 ರನ್, 65ಎಸೆತ) 20ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಪುಲ್‌ಟಾಸ್ ಎಸೆತದಲ್ಲಿ ಚೆಂಡನ್ನು ಟಚ್ ಮಾಡಿರಲಿಲ್ಲ. ಆರಂಭದಲ್ಲಿ ಧರ್ಮಸೇನ ಔಟ್ ತೀರ್ಪು ನೀಡಲು ಹಿಂದೇಟು ಹಾಕಿದರು. ಆದರೆ, ಆಸ್ಟ್ರೇಲಿಯದ ಆಟಗಾರರ ಬಲವಾದ ಮನವಿಗೆ ಮನ್ನಣೆ ನೀಡಿ ಮನಸ್ಸು ಬದಲಿಸಿ ಔಟ್ ತೀರ್ಪು ನೀಡಿದ್ದರು. ಚೆಂಡು ತನ್ನ ಬ್ಯಾಟ್ ಅಥವಾ ಗ್ಲೋಸ್‌ಗೆ ಸ್ಪರ್ಶಿಸದೇ ಇದ್ದರೂ ಔಟ್ ತೀರ್ಪು ನೀಡಿದ್ದಕ್ಕೆ ರಾಯ್ ಆಕ್ರೋಶ ಹೊರಹಾಕಿದ್ದರು. ಆದರೆ, ಇಂಗ್ಲೆಂಡ್‌ಗೆ ಅಂಪೈರ್ ನಿರ್ಧಾರ ಸ್ವೀಕರಿಸದೇ ಬೇರೆ ಹಾದಿಯಿರಲಿಲ್ಲ. ಅದಾಗಲೇ ಇಂಗ್ಲೆಂಡ್ ಬಳಿ ಅಂಪೈರ್ ತೀರ್ಪು ಪುನರ್‌ಪರಿಶೀಲಿಸಲು ಯಾವುದೇ ಆಯ್ಕೆಯಿರಲಿಲ್ಲ.

ರಾಯ್‌ಗೆ ದಂಡ: ತನ್ನ ವಿರುದ್ಧ ತಪ್ಪು ತೀರ್ಪು ನೀಡಿರುವ ಅಂಪೈರ್ ವಿರುದ್ಧ ರಾಯ್ ವಾಕ್ಸಮರ ನಡೆಸಿದ್ದರು. ಅಂಪೈರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ರಾಯ್‌ಗೆ ಪಂದ್ಯಶುಲ್ಕದಲ್ಲಿ ಶೇ.30ರಷ್ಟು ದಂಡ ವಿಧಿಸಲಾಗಿದೆ.

ಐಸಿಸಿ ದಂಡ ವಿಧಿಸುವ ಜೊತೆಗೆ ರಾಯ್ ಅವರ ಅಶಿಸ್ತಿನ ದಾಖಲೆಗೆ 2 ಡಿಮೆರಿಟ್ ಪಾಯಿಂಟ್ಸ್ ನ್ನು ಸೇರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News