ಭಾರತ ‘ಎ’ ತಂಡಕ್ಕೆ ವಿಂಡೀಸ್ ‘ಎ’ ವಿರುದ್ಧ ಜಯ

Update: 2019-07-12 19:08 GMT

ಮೊದಲ ಏಕದಿನ

ಕೂಲಿಡ್ಜ್(ಆ್ಯಂಟಿ ಗುವಾ), ಜು.12: ಕಡಿಮೆ ಮೊತ್ತದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ವೆಸ್ಟ್ ಇಂಡೀಸ್ ಎ ವಿರುದ್ಧ 65 ರನ್‌ಗಳಿಂದ ಜಯ ದಾಖಲಿಸಿದೆ. ಶ್ರೇಯಸ್ ಅಯ್ಯರ್ 77 ರನ್ ಗಳಿಸಿದ್ದರೆ, ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ನೇತೃತ್ವದ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿದರು.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಒಂದು ಹಂತದಲಿ 22 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಅಯ್ಯರ್ ಹಾಗೂ ಹನುಮ ವಿಹಾರಿ 4ನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿ ಭಾರತ 190 ರನ್ ಗಳಿಸಲು ನೆರವಾದರು.

ಟೀಮ್‌ಇಂಡಿಯಾ ದಂತೆಯೇ ಭಾರತ ಎ ತಂಡದಲ್ಲೂ ಮಧ್ಯಮ ಕ್ರಮಾಂಕದ ವೈಫಲ್ಯ ಕಂಡುಬಂದಿದ್ದು, 107ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಅಯ್ಯರ್(77)ತಂಡಕ್ಕೆ ಆಸರೆಯಾದರು.

ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್ ಹಾಗೂ ನಾಯಕ ಮನೀಶ್ ಪಾಂಡೆ ಮೊದಲ 8 ಓವರ್ ಒಳಗೆ ಔಟಾದಾಗ ಅಯ್ಯರ್‌ಗೆ ಇನಿಂಗ್ಸ್ ರಿಪೇರಿ ಮಾಡುವ ಸವಾಲು ಎದುರಾಯಿತು. ವಿಹಾರಿ(34ರನ್, 63 ಎಸೆತ)ತಾಳ್ಮೆಯ ಬ್ಯಾಟಿಂಗ್‌ನ ಮೂಲಕ ಅಯ್ಯರ್‌ಗೆ ಸಾಥ್ ನೀಡಿದರು. ಆದರೆ ಈ ಇಬ್ಬರು ಔಟಾದ ಬಳಿಕ ಭಾರತ ಕುಸಿತದ ಹಾದಿ ಹಿಡಿಯಿತು.

ವೆಸ್ಟ್‌ಇಂಡೀಸ್‌ನ ನಾಯಕ ರೋಸ್ಟನ್ ಚೇಸ್(4-19) ಭಾರತದ ಕೆಳ ಸರದಿಯನ್ನು ಬೇಧಿಸಿದರು. ಪ್ರವಾಸಿ ಭಾರತ 48.5 ಓವರ್‌ಗಳಲ್ಲಿ 190 ರನ್‌ಗೆ ಆಲೌಟಾಯಿತು.

ಸಾಧಾರಣ ಮೊತ್ತ ಗಳಿಸಿದ್ದ ಭಾರತ ತಂಡ ಖಲೀಲ್(3-16), ತ್ರಿವಳಿ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್(2-16), ರಾಹುಲ್ ಚಹಾರ್(2-32)ಹಾಗೂ ವಾಶಿಂಗ್ಟನ್ ಸುಂದರ್ (2-37)ಅವರ ಸಂಘಟಿತ ಪ್ರದರ್ಶನದ ಸಹಾಯದಿಂದ ವೆಸ್ಟ್ ಇಂಡೀಸ್‌ನ್ನು 35.5 ಓವರ್‌ಗಳಲ್ಲಿ ಕೇವಲ 125 ರನ್‌ಗೆ ಆಲೌಟ್ ಮಾಡಿತು.

ವಿಂಡೀಸ್ ಪರ ಜೋನಾಥನ್ ಕಾರ್ಟರ್ ಹಾಗೂ ಪೊವೆಲ್ ತಲಾ 41 ರನ್ ಗಳಿಸಿದರು. ಕೇವಲ ಮೂವರು ದಾಂಡಿಗರು ಎರಡಂಕೆಯ ಸ್ಕೋರ್ ಗಳಿಸಿದರು.

ಎರಡನೇ ಅನಧಿಕೃತ ಏಕದಿನ ಪಂದ್ಯ ಆ್ಯಂಟಿಗುವಾದಲ್ಲಿ ಜು.14 ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News