ಮೈತ್ರಿ ಸರಕಾರಕ್ಕೆ ಮೊದಲ ಯಶಸ್ಸು: ರಾಜೀನಾಮೆ ಹಿಂಪಡೆಯುತ್ತೇನೆ ಎಂದ ಎಂಟಿಬಿ ನಾಗರಾಜ್

Update: 2019-07-13 18:25 GMT

ಬೆಂಗಳೂರು, ಜು.13: ಮಾಜಿ ಸಿಎಂ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ನಡೆಸಿದ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಟಿ.ಬಿ.ನಾಗರಾಜ್ ರಾಜೀನಾಮೆ ಹಿಂಪಡೆಯಲು ಒಪ್ಪಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಲವು ಸುತ್ತಿನ ಮಾತುಕತೆ ನಡೆಸಿದರು. ಅಲ್ಲದೆ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ಹಿಂಪಡೆಯುವ ತೀರ್ಮಾನ ಕೈಗೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜು, ಅನಿವಾರ್ಯ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ಆದರೆ, ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ, ಕಾಂಗ್ರೆಸ್‌ನಲ್ಲಿಯೇ ಉಳಿಯಬೇಕೆಂದು ಮನವಿ ಮಾಡಿದ್ದಾರೆ. ಹೀಗಾಗಿ, ನಾನು ರಾಜೀನಾಮೆ ಹಿಂಪಡೆಯಲಿದ್ದೇನೆ ಎಂದು ಹೇಳಿದರು.

ಸೋಮವಾರ ಸದನಕ್ಕೆ ಹಾಜರಾಗಲಿದ್ದೇನೆ. ಆದರೆ, ಚಿಕ್ಕಬಳ್ಳಾಪುರದ ಶಾಸಕ ಕೆ.ಸುಧಾಕರ್‌ರನ್ನು ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಪ್ರಯತ್ನ ಮಾಡುತ್ತೇನೆ. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ನಾಳೆ ಮಧ್ಯಾಹ್ನದೊಳಗೆ ನಾನು ಪ್ರಯತ್ನ ಮಾಡುವೆ ಎಂದಿರುವ ಅವರು, ಸುಧಾಕರ್ ರಾಜೀನಾಮೆ ಹಿಂಪಡೆಯಲಿಲ್ಲ ಎಂದರೆ ನಾನೊಬ್ಬನೇ ಏನು ಮಾಡಲಿ ಎಂದು ಹೇಳುವ ಮೂಲಕ ಗೊಂದಲ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News