ಸಂವಿಧಾನ ವಿರೋಧಿ ಸರಕಾರ ಹೆಚ್ಚು ದಿನ ಇರುವುದಿಲ್ಲ: ನ್ಯಾ.ಗೋಪಾಲ ಗೌಡ
ಬೆಂಗಳೂರು, ಜು.13: ಯಾವುದೆ ಸರಕಾರಕ್ಕೆ ಎಷ್ಟೆ ಬಹುಮತ ಇದ್ದರೂ ಸಂವಿಧಾನ ವಿರೋಧಿ ನೀತಿ, ಜನವಿರೋಧಿ ಕಾಯ್ದೆಗಳನ್ನು ರಚನೆ ಮಾಡಿ ದೇಶದ ಜನರನ್ನು ತಪ್ಪು ದಾರಿಗೆ ಎಳೆದರೆ, ಅಂತಹ ಸರಕಾರದ ಜೀವ ಅಲ್ಪಾವಧಿ ಆಗಿರುತ್ತದೆ ಎಂದು ನಿವೃತ್ತ ನ್ಯಾ.ಗೋಪಾಲಗೌಡ ಅಭಿಪ್ರಾಯಿಸಿದರು.
ಶನಿವಾರ ಕರ್ನಾಟಕ ಲೇಬರ್ ರೆಪ್ರಸೆಂಟೇಟಿವ್ಸ್ ಫೋರಂ ನಗರದ ಗಾಂಧಿ ಭವನದಲ್ಲಿ ಕೇಂದ್ರ ಸರಕಾರದ ಇತ್ತೀಚಿನ ನೀತಿಗಳು ಮತ್ತು ಕಾರ್ಮಿಕ ವರ್ಗದ ಮೇಲೆ ಅದರ ಪರಿಣಾಮ ಹಾಗೂ ಮುಂದಿರುವ ಸವಾಲುಗಳು ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮೂಲತತ್ವಗಳಾದ ಸಮಾಜವಾದಿ, ಜಾತ್ಯತೀತತೆ, ಪ್ರಜಾಸತಾತ್ಮಕ, ಗಣರಾಜ್ಯ ಇವುಗಳ ಆಶಯದಲ್ಲಿಯೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆಡಳಿತ ನಡೆಸಬೇಕಾಗುತ್ತದೆ. ಅದನ್ನು ಮೀರಿದರೆ ನ್ಯಾಯಾಂಗವು ಕಾನೂನು ಕ್ರಮ ಕೈಗೊಳ್ಳುವಂತಹ ಎಲ್ಲ ಅಧಿಕಾರವು ಇರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ದೇಶದ ಸಂಪತ್ತಿಗೆ ಶ್ರಮಿಸುತ್ತಿರುವವರು ಕಾರ್ಮಿಕರಾಗಿದ್ದಾರೆ. ಕಾರ್ಮಿಕ ಸಂಘಟಗಳು ಎಲ್ಲ ಕಾರ್ಮಿಕರನ್ನು ಒಗ್ಗಟ್ಟಿನಿಂದ ಕರೆದೊಯ್ಯುತ್ತಿದ್ದಾರೆ. ಆದರೆ, ಇವತ್ತು ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ರದ್ದು ಪಡಿಸಲು ಎಲ್ಲ ರೀತಿಯ ತಯಾರಿ ನಡೆಸುತ್ತಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಪರಿಣಾಮಕಾರಿ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಮಿಕ ಸಂಘಗಳನ್ನು ಸ್ಥಾಪಿಸುವಂತಹ ಕಾನೂನನ್ನು ಸ್ವಾತಂತ್ರ ಪೂರ್ವದಲ್ಲಿಯೆ ಬ್ರಿಟಿಷ್ ಅಧಿಕಾರಿಗಳು, ಕಾರ್ಮಿಕರ ಮುಖಂಡರು, ರಾಜಕೀಯ ತಜ್ಞರು ಜೊತೆಗೂಡಿ ಸ್ಥಾಪಿಸಿದರು. ಸಂವಿಧಾನ ರಚನೆಯಾದ ಮೇಲೆ ಅದು ಅನಮೋದನೆಗೊಂಡಿತು. ಈಗ ಕೇಂದ್ರ ಸರಕಾರ ಕಾರ್ಮಿಕ ಸಂಘಗಳ ಸ್ಥಾಪನೆಯ ಕಾನೂನನ್ನು ರದ್ದುಪಡಿಸಲು ಮುಂದಾಗಿದೆ ಎಂದು ಅವರು ಹೇಳಿದರು.
ಕಾರ್ಮಿಕ ಸಂಘಟನೆಗಳ ಕಟ್ಟುನಿಟ್ಟಿನ ಕಾನೂನುಗಳಿಂದಾಗಿ ಕಾರ್ಪೊರೇಟ್ ಕಂಪನಿಗಳು ಭಾರತಕ್ಕೆ ಬರುತ್ತಿಲ್ಲ ಎಂದು ಆರೋಪಿಸಿ, ಕಾರ್ಮಿಕರ ಕಾನೂನುಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಕಾರ್ಮಿಕರಿಲ್ಲದೆ ದೇಶದ ಉತ್ಪಾದನೆ ಸಾಧ್ಯವಿಲ್ಲ. ಉತ್ಪಾದನೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಮಿಕರಿಗೆ ಕನಿಷ್ಠ ವೇತನ ಕೊಡದೆ, ಕಾರ್ಮಿಕರಿಂದ ಹೆಚ್ಚುವರಿ ದುಡಿಮೆ ಮಾಡಿಸಿಕೊಂಡು ಗಳಿಸಿದ ಹಣವೆ ಬಂಡವಾಳಶಾಹಿ ಬೆಳವಣಿಗೆಗೆ ಕಾರಣವಾಗಿದೆ. ಹೀಗಾಗಿ ಬಂಡವಾಳಶಾಹಿಗಳಲ್ಲಿರುವ ಸಂಪತ್ತಿನಲ್ಲಿ ಕಾರ್ಮಿಕರ ಪಾಲೂ ಇದೆ. ಈ ಬಗ್ಗೆ ನಮ್ಮ ಸರಕಾರಗಳು ಅರ್ಥ ಮಾಡಿಕೊಳ್ಳಬೇಕು.
-ನ್ಯಾ.ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್