ವೈಟ್ ಫೀಲ್ಡ್ ನ ಪ್ರಮುಖ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರು
ಬೆಂಗಳೂರು, ಜು. 13 : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವರ್ತೂರು ಕೋಡಿ ವೃತ್ತಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಹೆಸರಿಟ್ಟು ಅಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು.
ನಗರದ ಪ್ರಮುಖ ವೃತ್ತವೊಂದಕ್ಕೆ ಮಧುಕರ್ ಅವರ ಹೆಸರಿಡುವ ಬಿಬಿಎಂಪಿಯ ಈ ನಿರ್ಧಾರವನ್ನು ಸ್ವಾಗತಿಸಿರುವ ಮಧುಕರ್ ಶೆಟ್ಟಿ ಅವರ ಕುಟುಂಬ ಸದಸ್ಯರು ಹಾಗು ಅವರ ಜೊತೆ ಕೆಲಸ ಮಾಡಿರುವ ಅಧಿಕಾರಿಗಳು, ಅಭಿವೃದ್ಧಿಗೆ ಮೀಸಲಾದ ಹಣದಲ್ಲಿ ಪ್ರತಿಮೆ ನಿರ್ಮಾಣ ಮಾಡುವುದು ಮಾತ್ರ ಬೇಡ ಎಂದು ವಿನಂತಿಸಿದ್ದಾರೆ.
ಹೀಗೆ ಪ್ರತಿಮೆ ನಿರ್ಮಾಣ ಮಾಡುವುದು ಸ್ವತಃ ಮಧುಕರ್ ಶೆಟ್ಟಿ ಅವರಿಗೂ ಇಷ್ಟವಿರಲಿಲ್ಲ, ಹಾಗಾಗಿ ಅವರ ಪ್ರತಿಮೆ ನಿರ್ಮಾಣ ಬೇಡ ಎಂದು ಅವರ ಕುಟುಂಬ ಸದಸ್ಯರು ಹಾಗು ಅಧಿಕಾರಿಗಳು ಪರಸ್ಪರ ಚರ್ಚಿಸಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮಧುಕರ್ ಶೆಟ್ಟಿ ಅವರು ದಕ್ಷ ಹಾಗು ಪ್ರಾಮಾಣಿಕ ಕಳಕಳಿಯ ಅಧಿಕಾರಿಯಾಗಿ ರಾಜ್ಯಾದ್ಯಂತ ಭಾರೀ ಜನಮನ್ನಣೆ ಗಳಿಸಿದವರು. ಅವರು ನಿಧನರಾದಾಗ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ಹಾಗಾಗಿ ಐಟಿ ಕೇಂದ್ರವಾಗಿರುವ ವರ್ತೂರು ಕೋಡಿಗೆ ಅವರ ಹೆಸರಿಟ್ಟು ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಯುವ ಅಧಿಕಾರಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿತ್ತು.
ಈಗ ಕುಟುಂಬ ಸದಸ್ಯರು ಹಾಗು ಅವರ ಜೊತೆ ಕೆಲಸ ಮಾಡಿರುವ ಅಧಿಕಾರಿಗಳ ಮನವಿ ಮೇರೆಗೆ ಬಿಬಿಎಂಪಿ ಸ್ಥಳೀಯ ಕಾರ್ಪೊರೇಟರ್ ಜೊತೆ ಈ ಬಗ್ಗೆ ಚರ್ಚಿಸಿ ವೃತ್ತಕ್ಕೆ ಅವರ ಹೆಸರು ಮಾತ್ರ ಇಟ್ಟು ಪ್ರತಿಮೆ ನಿರ್ಮಾಣ ಮಾಡದಿರಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.