ಸರಕು-ಸಂಸ್ಕೃತಿಯ ಮೋಹಜಾಲದಲ್ಲಿ ನಶಿಸುತ್ತಿ ರುವ ಮಾನವ ಬದ್ಧತೆಗಳು-ಸಂವೇದನೆಗಳು

Update: 2019-07-13 18:05 GMT

ಜಾಗತೀಕರಣವು ಈ ಎಲ್ಲಾ ವೈವಿಧ್ಯತೆಗೆ ಸಂಚಕಾರ ಒದಗಿಸಿದೆ. ಇಂದು ಸೈಬರ್ ಜಗತ್ತಿನ ಪ್ರಭುತ್ವ ಶಕ್ತಿಗಳು ಕಂಪ್ಯೂಟರ್ ಶಕ್ತಿಯನ್ನು ಹಾಗೂ ಅದರ ಸಂಪರ್ಕ ಸಾಮರ್ಥ್ಯವನ್ನು ಹೆಚ್ಚುತ್ತಾ ಹೋಗಿ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಹೆಚ್ಚು ಮಗ್ನವಾಗಿದೆ. ಹಿಂಸೆ ಹಾಗೂ ಟೆರರಿಸಂಗೆ ಕರೆಕೊಡುವುದು, ಮನೆಯಲ್ಲೇ ಬಾಂಬ್ ತಯಾರಿಸಿ ಉಡಾಯಿಸುವುದರ ಬಗ್ಗೆ ಹೇಳಿಕೊಡುವುದು ಇದೆಲ್ಲಾ ಇಂದಿನ ಆಧುನಿಕತೆಯು ತಂದೊಡ್ಡಿದ ಅನಾಹುತಗಳು. ಬೃಹತ್ ಪ್ರಮಾಣದ ಉದ್ದಿಮೆಗಳ ಸ್ಥಾಪನೆಗೆ ರೈತರ ಭೂಮಿಯನ್ನು ದೋಚಿ ಅವರನ್ನು ನೆಲೆ ಇಲ್ಲದವರನ್ನಾಗಿ ಮಾಡಲಾಗಿದೆ.

ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಗ್ರಂಥದಲ್ಲಿ ಹೀಗೆ ಹೇಳುತ್ತಾರೆ-‘‘ಮನುಷ್ಯ ಎಷ್ಟೋ ತಪ್ಪು ಮಾಡುತ್ತಾನೆ. ಆದರೆ ಮಾನವ ಜೀವನದ ಪರಸ್ಪರ ಸ್ನೇಹ- ಸಹಾನುಭೂತಿಯ ಭಾವನೆಗಳ ಪ್ರಭಾವವನ್ನು ಗಮನಿಸದೇ, ಅವನನ್ನು ಯಂತ್ರವೆಂದು ತಿಳಿದು ವ್ಯವಹಾರದ ಕಟ್ಟಳೆಗಳನ್ನು ರಚಿಸುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ ಎಂದು. ಅವರ ‘ಹಿಂದ್ ಸ್ವರಾಜ್’ ಕೃತಿ ಒಂದು ಶತಮಾನದಷ್ಟು ಹಳೆಯದಾದರೂ ಇಂದಿಗೂ ಪ್ರಸ್ತುತ ಸಮಸ್ಯೆಗಳಿಗೆ ಉತ್ತರವನ್ನು ಗಮನ ಹರಿಸಿದ್ದು, ಅದರ ಪ್ರಸ್ತುತತೆಯನ್ನು ಎತ್ತಿ ಹಿಡಿಯುತ್ತದೆ. ಯಂತ್ರ ನಾಗರಿಕತೆ ರೂಪುಗೊಳ್ಳುತ್ತಿದ್ದ ಆಧುನಿಕತೆಯ ವಿರುದ್ಧ ಒಂದು ಪರ್ಯಾಯ ಬದುಕಿನ ಸಾಧ್ಯತೆಯನ್ನು ಅವರು ಅದರಲ್ಲಿ ನೀಡುತ್ತಾರೆ. ಅಮೆರಿಕದಂತಹ ದೇಶಗಳು ಪೆಟ್ರೋಲ್‌ಗಾಗಿ ಇರಾನ್, ಇರಾಕ್‌ಗಳ ಮೇಲೆ ದಾಳಿ ನಡೆಸಿ ಮಾನವೀಯತೆ ಮೇಲೆ ಸವಾರಿ ಮಾಡುತ್ತಿರುವ ಇಂತಹ ನಾಗರಿಕತೆಯ ಅನಾಹುತದ ಬಗ್ಗೆ ಅವರು ಆ ಕಾಲದಲ್ಲೇ ಗಮನ ಸೆಳೆದಿದ್ದರು. ಅವರ ‘ಗ್ರಾಮ ಸ್ವರಾಜ್ಯ’ದ ಚಿಂತನೆ ಇಂದಿನ ಸರಕು -ಸಂಸ್ಕೃತಿ ವ್ಯವಸ್ಥೆಗೆ ಒಂದು ಪರ್ಯಾಯ ಶಕ್ತಿ ಮತ್ತು ಸಾಧ್ಯತೆಯೂ ಹೌದು. ನಾವಿಂದು ಹೈಟೆಕ್ ಹೊಟ್ಟೆಬಾಕ ಐಷಾರಾಮದ ಸಂಸ್ಕೃತಿಗೆ ಮೋಹಿತರಾಗಿದ್ದೇವೆ. ದೇಶದ ಅರ್ಧದಷ್ಟು ಜನ ಬಡತನದಿಂದ ನರಳುತ್ತಿದ್ದರೂ ಶ್ರೀಮಂತ ಮತ್ತು ಮೇಲ್ವರ್ಗ ಈ ಕೊಳ್ಳು ಬಾಕ ಸಂಸ್ಕೃತಿಗೆ ವಶವಾಗುತ್ತಿದ್ದಾರೆ. ಇಂದು ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ಸಂಗ್ರಹಣೆಯ ಪೈಪೋಟಿ ನಡೆಯುತ್ತಿದೆ. ಧರ್ಮ ಪರಿಶುದ್ಧತೆಯ ಹೆಸರಿನಲ್ಲಿ ಎಲ್ಲೆಲ್ಲೂ ಬಾಂಬ್ ದಾಳಿ ಹೆಚ್ಚುತ್ತಿದೆ.

ಭೂಮಿಯ ಸಂಪನ್ಮೂಲವನ್ನು ಎಷ್ಟೊಂದು ಕಬಳಿಸಬೇಕೋ ಅಷ್ಟೆಲ್ಲವನ್ನೂ ದರೋಡೆ ಮಾಡಿದ ಕಾರಣ ಅದಕ್ಕೆ ಎಂತಹ ಬೆಲೆ ತೆರಬೇಕಾಯಿತು ಎಂಬುದು ಕೊನೆಗೂ ಈಗ ಅರಿವಿಗೆ ಬಂದಿದೆ. ಮನುಷ್ಯನ ಅಗತ್ಯಕ್ಕಿಂತ ಹೆಚ್ಚಿನ ಪರಿಗ್ರಹಣ ಸಲ್ಲದು ಎಂದು ಗಾಂಧೀಜಿ ಗ್ರಾಮ ನಾಗರಿಕತೆ ಕಟ್ಟುವ ಬಗ್ಗೆ ಪ್ರಾಕ್ಟಿಕಲ್ ಆಗಿ ಯೋಚಿಸಿದರು. ಹಾಗೆಯೇ ಪ್ರಕೃತಿಯ ಜತೆ ಹೊಂದಾಣಿಕೆ ಮಾಡಿಕೊಂಡು ಸಹಕರಿಸುವ ಕೃಷಿಯ ಬಗ್ಗೆ ಪುಕುವೋಕಾ ಚಿಂತಕ ಪ್ರಕೃತಿಯ ಬಗ್ಗೆ ಮಾನವೀಯ ನೆಲೆಯಲ್ಲಿ ಯೋಚಿಸಿದರು, ಹಾಗೂ ಖ್ಯಾತ ಕೃಷಿ ಚಿಂತಕ ವೆಂಡಲ್ ಬೆರಿ ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಿದ ಅಮೆರಿಕದ ಸಿದ್ಧಾಂತ ಟೀಕಿಸಿ ಭೂ ಸಾಂಸ್ಕೃತಿಕ ಬಂಧ ಅದು ನಾಶ ಪಡಿಸುತ್ತದೆ ಎಂದು ಚಿಂತಿಸಿದ. ಭಾರತೀಯ ರೈತನಿಗೂ ಭೂಮಿ ಎಂದರೆ ತಾಯಿಯ ಸಮಾನ ಎಂಬ ಭಾವನಾತ್ಮಕ ಬಂಧ ಇದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಜೋಡಿಸುವ ಗ್ರಾಮೀಣ ಪ್ರಜ್ಞೆಯ ನೆಲೆಗಳು. ಆದರೆ ಹಳತು ಅಂದರೆ ನಮಗೆ ಕಸ. ಅಂತಹ ಸಂವೇದನೆಗಳೂ ನಮಗೆ ಹಾಸ್ಯಾಸ್ಪದ. ಹಿಂದೆ ಹಳ್ಳಿಗಳು ಸ್ವಯಂ ಪೂರ್ಣವಾಗಿದ್ದವು. ಜೀವಂತವಾಗಿದ್ದವು ಅಲ್ಲಿಯ ಜನರಲ್ಲಿ ಆರ್ಥಿಕ ನಿರ್ಮಿತಿಯ ಅಡಿಪಾಯವಾಗಿದ್ದ ಅನೇಕ ಕಸಬು ಹಾಗೂ ಉಪಕಸಬುಗಳಿದ್ದವು. ನಾನಾ ರೀತಿಯ ಲೋಹ ಜ್ಞಾನವೂ ಅವರಿಗಿತ್ತು. ಅದು ಹಳ್ಳಿಯ ಬದುಕನ್ನು ಹಸನು ಮಾಡಿತ್ತು. ಅದೆಲ್ಲವೂ ಬದುಕಿಗೊಂದು ಅರ್ಥ ಕೊಡುವ ಜೀವನ ಕ್ರಮವಾಗಿತ್ತು. ಅಲ್ಲಿ ಅಲ್ಪ ತೃಪ್ತಿ ಇತ್ತು. ಈಗ ಅದೆಲ್ಲವೂ ನಾಶ ಮಾಡಿ ವೈವಿಧ್ಯಮಯ ಹಳೇ ಕಸಬನ್ನು ತೊರೆದು ತಮಗೆ ಒಗ್ಗದ ಏಕತಾನತೆಯ ಹೊಸ ಕಸಬು ಹಿಡಿದು ಹಳ್ಳಿಗರ ಕಸಬಿನ ಪರಿಣತಿಯೂ ನಾಶಗೊಂಡಿತು. ವೈವಿಧ್ಯತೆಯ ಅಕ್ಷಯ ಪಾತ್ರೆಯಂತಿದ್ದ ಹಳ್ಳಿಯ ಚಿತ್ರಣವೇ ಬದಲುಗೊಂಡಿತು. ದುರಂತವೆಂದರೆ ಜಾಗತೀಕರಣವು ಈ ಎಲ್ಲಾ ವೈವಿಧ್ಯತೆಗೆ ಸಂಚಕಾರ ಒದಗಿಸಿದೆ. ಇಂದು ಸೈಬರ್ ಜಗತ್ತಿನ ಪ್ರಭುತ್ವ ಶಕ್ತಿಗಳು ಕಂಪ್ಯೂಟರ್ ಶಕ್ತಿಯನ್ನು ಹಾಗೂ ಅದರ ಸಂಪರ್ಕ ಸಾಮರ್ಥ್ಯವನ್ನು ಹೆಚ್ಚುತ್ತಾ ಹೋಗಿ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಹೆಚ್ಚು ಮಗ್ನವಾಗಿದೆ. ಹಿಂಸೆ ಹಾಗೂ ಟೆರರಿಸಂಗೆ ಕರೆಕೊಡುವುದು, ಮನೆಯಲ್ಲೇ ಬಾಂಬ್ ತಯಾರಿಸಿ ಉಡಾಯಿಸುವುದರ ಬಗ್ಗೆ ಹೇಳಿಕೊಡುವುದು ಇದೆಲ್ಲಾ ಇಂದಿನ ಆಧುನಿಕತೆಯು ತಂದೊಡ್ಡಿದ ಅನಾಹುತಗಳು. ಬೃಹತ್ ಪ್ರಮಾಣದ ಉದ್ದಿಮೆಗಳ ಸ್ಥಾಪನೆಗೆ ರೈತರ ಭೂಮಿ ಯನ್ನು ದೋಚಿ ಅವರನ್ನು ನೆಲೆ ಇಲ್ಲದವರನ್ನಾಗಿ ಮಾಡಲಾಗಿದೆ. ಚೈಲ್ಡ್ ಪೊರ್ನೋಗ್ರಫಿ ಇಂದು ವೇಗದಲ್ಲಿ ಬೆಳೆಯುವ ಉದ್ಯಮವಾಗಿದೆ. ಹೀಗಾಗಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳು ಇಂದು ಸಾಮಾನ್ಯ ವಿಷಯಗಳಾಗಿವೆ. ಮೈಸೂರಿನಲ್ಲಿ ಇತ್ತೀಚೆಗೆ ತಂದೆ ಮಾಡಿದ ಸಾಲ ತೀರಿಸಲಾಗಿಲ್ಲ ಎಂಬ ಕಾರಣಕ್ಕೆ ಚಿಕ್ಕಮಗಳನ್ನು ಕರೆದುಕೊಂಡು ಹೋಗಿ ಅವಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಅವಳನ್ನು ದಂಧೆಗೆ ಬಳಸಿಕೊಂಡಿದ್ದು, ಇದೊಂದು ಸಾಮಾನ್ಯ ಸಂಗತಿ ಎಂಬಂತೆ ಇರುವ ನಮ್ಮ ಆಧುನಿಕ ಸಮಾಜದ ನಿರ್ಲಿಪ್ತ ನಮ್ಮ ಸುತ್ತ ಗೋಡೆ ಕಟ್ಟಿಕೊಂಡು ಇರುವ ಸುಶಿಕ್ಷಿತ ಜನರಲ್ಲಿ ಸಿನಿಕತೆಯನ್ನು ಸೃಷ್ಟಿಸಿದೆ. ಆಧುನಿಕತೆಯ ಪ್ರಗತಿಯೊಂದಿಗೆ ಇದನ್ನೂ ಸಮೀಕರಿಸಲಾಗುತ್ತಿದೆ. ಈ ಎಲ್ಲಾ ಅನಿಷ್ಟಗಳಿಗೂ ಆಧುನಿಕ, ತಾಂತ್ರಿಕ ಪ್ರಗತಿಗೂ ಅವಿನಾಭಾವ ಸಂಬಂಧವಿದೆ. ಮುಖ್ಯವಾಗಿ ತಾಂತ್ರಿಕ ಪ್ರಗತಿಯಿಂದ ಉಂಟಾಗಿರುವ ಬೆಳವಣಿಗೆಗಳು ಜೀವನ ಸುಲಭ ಸಾಧ್ಯ ಮಾಡಿದೆ. ಆದರೆ ದುರಂತವೆಂದರೆ ಇದು ಮನುಷ್ಯನನ್ನು ಏಕಾಂಗಿಯನ್ನಾಗಿ ಮಾಡಿದೆ. ಪ್ರತಿಯೊಂದು ವಿಚಾರದಲ್ಲೂ ವ್ಯವಹಾರಿಕ ದೃಷ್ಟಿ ಬೆಳೆದು ಮಾನವರು ಸೀಮಿತ ವೃತ್ತದೊಳಗೆ ಬಂಧಿತರಾಗುತ್ತಿದ್ದಾರೆ. ಅಕ್ಕ-ಪಕ್ಕದ ಮನೆಯವರನ್ನು ಮಾತಾಡಿ ಕಷ್ಟ ಸುಖ ಹಂಚಿಕೊಳ್ಳುವ ದಿನಗಳು ಇಂದು ಇಲ್ಲವಾಗಿದೆ. ಆಧುನಿಕ ಜಗತ್ತಿನಲ್ಲಿ ಪರಸ್ಪರರ ಮೇಲೆ ಅನುಮಾನ ಅಸೂಯೆ ಹೆಚ್ಚಾಗಿ ಬಾಂಧವ್ಯವೇ ಇಲ್ಲವಾಗಿದೆ. ಹೀಗೆ ಮಾನವರು ಕೊಳ್ಳುಬಾಕ ಸಂಸ್ಕೃತಿಯ ಜೊತೆಗೆ ಭೌತ ಜಗತ್ತಿನಲ್ಲೇ ಮುಳುಗುತ್ತಿದ್ದಾರೆ. ಇದರಿಂದ ಪರಕೀಯತೆ, ಅನಾಥ ಭಾವನೆ ತಬ್ಬಲಿತನ ಕಾಡುತ್ತಿರುತ್ತದೆ. ಒಟ್ಟಾರೆಯಾಗಿ ಈ ಮೈಂಡ್‌ಸೆಟ್‌ನಿಂದ ಹೊರ ಬರಬೇಕಾಗಿದೆ. ನಿಜವಾದ ಬದ್ಧತೆ ಇರಬೇಕಾದದ್ದು ಮಾನವೀಯತೆಗೆ ಹೊರತು ನಮ್ಮ ಸುತ್ತ ಗೋಡೆ ಕಟ್ಟಿಕೊಂಡು ಒಬ್ಬಂಟಿಯಾಗಿ ಇರುವುದಕ್ಕಲ್ಲ.

Writer - ಕೆ. ತಾರಾಭಟ್

contributor

Editor - ಕೆ. ತಾರಾಭಟ್

contributor

Similar News