×
Ad

ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು ನಾಚಿಕೆಗೇಡು: ಮಾರ್ಗರೇಟ್ ಆಳ್ವಾ

Update: 2019-07-13 23:40 IST

ಬೆಂಗಳೂರು, ಜು.13: ಚುನಾವಣೆಯಲ್ಲಿ ಒಂದು ಪಕ್ಷದಿಂದ ಗೆದ್ದ ಮೇಲೆ ಶಾಸಕರು ಹಣ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು ನಾಚಿಕೆಗೇಡು. ಇದಕ್ಕಿಂತ ಕೆಟ್ಟ ರಾಜಕೀಯ ಇನ್ನೊಂದಿಲ್ಲ ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಕಿಡಿಕಾರಿದ್ದಾರೆ.
ಶನಿವಾರ ನಗರದಲ್ಲಿ ಬಿ-ಪ್ಯಾಕ್ ಸಂಸ್ಥೆ ಆಯೋಜಿಸಿದ್ದ ನಾಗರಿಕ ನಾಯಕತ್ವ ತರಬೇತಿ ಪದವಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಅಸಮಾಧಾನ ಹೊರಹಾಕಿ, 50 ವರ್ಷದ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ರಾಜಕೀಯವನ್ನು ನೋಡಿರಲಿಲ್ಲ ಎಂದು ವಿಷಾದಿಸಿದರು.

ಈ ಹಿಂದೆ ತಾವು ರಾಜಕಾರಣ ಆರಂಭಿಸಿದ ಕಾಲಘಟ್ಟದಲ್ಲಿ ಪಕ್ಷ, ತತ್ವ, ಸಿದ್ಧಾಂತ, ಮೌಲ್ಯಗಳಿಗೆ ಬೆಲೆ ಇತ್ತು. ಈಗ ರಾಜಕಾರಣದಲ್ಲಿ ಅವೆಲ್ಲಾ ಕಾಣೆಯಾಗಿವೆ. ಹಣ, ಜಾತಿ ಮುಖ್ಯವಾಗಿ ಬಿಟ್ಟಿವೆ. ಪ್ರಾಮಾಣಿಕತೆ ಮತ್ತು ಬದ್ಧತೆಯುಳ್ಳ ನಾಯಕರನ್ನು ಆಯ್ಕೆ ಮಾಡುವತ್ತ ಜನ ಗಮನಹರಿಸಬೇಕು ಎಂದು ತಿಳಿಸಿದರು.

ಹಾಗೆಯೇ ನಾಯಕರಾದವರು ಪ್ರಾಮಾಣಿಕತೆಯಿಂದ ತತ್ವ, ಸಿದ್ಧಾಂತಗಳನ್ನು ಪಾಲಿಸಿ, ಮೌಲ್ಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಮೂಲಕ ಜನರು ತಮ್ಮ ಬಗ್ಗೆ ಹೆಮ್ಮೆಪಡುವಂತೆ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ರಾಜಕಾರಣಿಗಳಿಗೆ ಒಂದು ಬೆಲೆ ಸಿಗುತ್ತದೆ. ಇನ್ನು, ಬಿ-ಪ್ಯಾಕ್ ಸಂಸ್ಥೆ ಬಿ-ಕ್ಲಿಪ್ ಮೂಲಕ ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಾಮಾನ್ಯರಲ್ಲೂ ನಾಯಕತ್ವ ಗುಣಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದೆಯಲ್ಲಾ ಯಾವುದೇ ಕಟ್ಟಡಗಳನ್ನು ನಿರ್ಮಿಸಿದರೆ 100-150 ವರ್ಷ ಬಾಳಿಕೆ ಬರುತ್ತಿತ್ತು. ಈಗ ಕಾಮಗಾರಿಯ ಗುಣಮಟ್ಟವೂ ಕುಸಿದಿದೆ. ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಕೆಲ ಕಟ್ಟಡಗಳು ಬಿದ್ದೇ ಹೋಗುತ್ತವೆ. ಈ ಅವಘಡ ಸಂಭವಿಸಿದಾಗ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತೇವೆ. ಇಂತಹ ಆಡಳಿತ ವ್ಯವಸ್ಥೆ ಬದಲಾಗಬೇಕಿದೆ. ಕಾಮಗಾರಿಗಳ ಗುಣಮಟ್ಟ ಸುಧಾರಿಸಬೇಕಿದೆ ಎಂದು ಹೇಳಿದರು.

ಬಿ-ಪ್ಯಾಕ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಮಾತನಾಡಿ, ಬೆಂಗಳೂರು ಉತ್ತಮ ನಗರವಾಗಿದೆ. ಉತ್ತಮ ಹವಾಗುಣ ಹಾಗೂ ಆಶಾಭಾವದ ಜನರನ್ನು ಹೊಂದಿದೆ. ಜತೆಗೆ ದೊಡ್ಡ ಅವಕಾಶಗಳು ಇಲ್ಲಿವೆ. ಹಾಗಾಗಿ ಎಲ್ಲರೂ ಸೇರಿ ಉತ್ತಮ ಆಡಳಿತದತ್ತ ಗಮನಹರಿಸಬೇಕಿದೆ. ನಗರದಲ್ಲಿ ಉತ್ತಮ ಆಡಳಿತ ವ್ಯವಸ್ಥೆಯನ್ನು ಸಾಧಿಸಲು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಸಾರ್ವಜನಿಕ ಸೇವೆಯ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಬಿ-ಪ್ಯಾಕ್ ಸಂಸ್ಥೆಯು ಬಿ-ಕ್ಲಿಪ್ ಮೂಲಕ ನೀಡುವ ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 60 ಮಂದಿಗೆ ಪದವಿ ಪತ್ರಗಳನ್ನು ವಿತರಿಸಲಾಯಿತು.

ಚುನಾವಣೆಗಳಲ್ಲಿ ಮಹಿಳೆಯರಿಗೆ ಟಿಕೆಟ್ ಕೇಳಿದರೆ ಗೆಲ್ಲುವ ಸಾಮರ್ಥ್ಯ ಇಲ್ಲ ಎಂದು ಟಿಕೆಟ್ ನೀಡುವುದೇ ಇಲ್ಲ. ಹಣ, ಜಾತಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮಹಿಳೆಯರು ರಾಜಕಾರಣದಲ್ಲಿ ಮುಂದೆ ಬರುವುದು ಹೇಗೆ?

-ಮಾರ್ಗರೇಟ್ ಆಳ್ವಾ, ಮಾಜಿ ರಾಜ್ಯಪಾಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News