×
Ad

ರಾಷ್ಟ್ರೀಯ ಭಾಷಾ ನೀತಿ ಜಾರಿಯಾಗಲಿ: ಬರಗೂರು ರಾಮಚಂದ್ರಪ್ಪ

Update: 2019-07-13 23:46 IST

ಬೆಂಗಳೂರು, ಜು.13: ಆಯಾ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಸ್ಥಳೀಯ ರಾಜ್ಯಭಾಷೆ ಕಡ್ಡಾಯ ಎಂಬ ಭಾಷಾ ರಾಷ್ಟ್ರೀಯ ನೀತಿ ಜಾರಿಯಾಗಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 14 ನೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಅನ್ಯಭಾಷಿಕರೇ ಅಧಿಕ ಸಂಖ್ಯೆಯಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳು ಬಾರದವರಿಗೆ ಉದ್ಯೋಗವಿಲ್ಲ ಎಂಬ ರಾಷ್ಟ್ರೀಯ ನೀತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ರಂಗಭೂಮಿ, ಚಲನಚಿತ್ರ, ಸಿನಿಮಾ ಸೇರಿದಂತೆ ಎಲ್ಲ ವರ್ಗದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿದ್ದರೂ, ಬಿಡಿಬಿಡಿಯಾಗಿ ಸಿಗುತ್ತಿವೆ. ಹೀಗಾಗಿ, ಎಲ್ಲ ಸೌಲಭ್ಯಗಳು ಒಂದೇ ಕಡೆ ಸಿಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರತ್ಯೇಕ ಕೋಶವೊಂದನ್ನು ರಚಿಸಬೇಕು ಎಂದು ಅವರು ಹೇಳಿದರು.

ಕನ್ನಡ ರಂಗಭೂಮಿಯು ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುತ್ತದೆ. ದೇಶದಲ್ಲಿ ನಡೆದ ಎಲ್ಲ ಚಳವಳಿಯಲ್ಲಿಯೂ ರಂಗಭೂಮಿ ಸಕ್ರಿಯವಾಗಿ ಕೆಲಸ ಮಾಡಿದೆ ಎಂದ ಅವರು, ಸ್ವಾತಂತ್ರ ಪೂರ್ವದಲ್ಲಿ ನಡೆದ ಚಳವಳಿಯಲ್ಲಿ ಅಪಾರವಾದ ಪಾತ್ರ ವಹಿಸಿದೆ. ಇನ್ನು ಸ್ವಾತಂತ್ರ ನಂತರದಲ್ಲಿ ನಡೆದ ಸಮಾನತೆ, ಸೌಹಾರ್ದ ಚಳವಳಿಯಲ್ಲಿಯೂ ರಂಗಭೂಮಿ ಕಾರ್ಯ ನಿರ್ವಹಿಸುತ್ತಿದೆ ಎಂದು ನುಡಿದರು.

ದೇಶದಲ್ಲಿ ಬುಡಕಟ್ಟು ಜನಾಂಗಗಳು ರಂಗಭೂಮಿಯನ್ನು ಹುಟ್ಟು ಹಾಕಿದರು. ಅಂದು ಹೊಟ್ಟೆಪಾಡಿಗಾಗಿ ರಂಗಭೂಮಿ ಇತ್ತು. ಒಂದು ಕಡೆ ಹೊಟ್ಟೆಪಾಡಿಗಾಗಿ ನಾಟಕವಾಡುತ್ತಿದ್ದವರು ಇದ್ದರೆ, ಮತ್ತೊಂದು ಕಡೆ ಹಸಿದವರಿಗಾಗಿ ಬೀದಿ ನಾಟಕವಾಡುತ್ತಿದ್ದರು ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಎಚ್.ಜಿ.ಸೋಮಶೇಖರ್ ಮಾತನಾಡಿ, ಗ್ರಾಮಾಂತರ ಪ್ರದೇಶ ಸೇರಿದಂತೆ ಎಲ್ಲ ಕಡೆಗಳಿಗೂ ಅನುಕೂಲವಾಗುವಂತೆ ಸಣ್ಣ ಸಣ್ಣ ರಂಗ ಮಂದಿರಗಳನ್ನು ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು. ಜನರಲ್ಲಿ ರಂಗಪ್ರಜ್ಞೆಯನ್ನು ಬೆಳೆಸಲು ಸರಕಾರ ಪ್ರೋತ್ಸಾಹ ನೀಡಿದರೆ ಸಾಮಾಜಿಕ ಬದಲಾವಣೆ ಸ್ವಲ್ಪ ಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಏಕಾಏಕಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ಒಂದೊಂದೇ ಹೆಜ್ಜೆಯನ್ನಿಡುತ್ತಾ ರಾಜಕೀಯವಾಗಿ, ಧಾರ್ಮಿಕವಾಗಿ ಜಾಗೃತಿ ಮೂಡಿಸುತ್ತಾ ಹೋದಂತೆ ಸೈದ್ಧಾಂತಿಕವಾಗಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡರೂ ಅದು ಯಶಸ್ಸಿನ ಮೆಟ್ಟಿಲಾಗಿರುತ್ತದೆ. ರಂಗಭೂಮಿ ಜತೆಗೆ ಎಲ್ಲರಿಗೂ ಅಗತ್ಯವಾದ ಅಕ್ಷರ ಜ್ಞಾನ, ವಯಸ್ಕರ ಶಿಕ್ಷಣ ನೀಡಬೇಕಾದ ಅಗತ್ಯವೂ ಇದೆ ಎಂದು ಸಲಹೆ ನೀಡಿದರು.

ರಂಗಭೂಮಿಗೆ ಸಾವಿಲ್ಲ: ಯಾವ ಕಲಾ ಮಾಧ್ಯಮದಲ್ಲಿಯೂ ಭೂಮಿ ಎನ್ನುವುದಿಲ್ಲ. ರಂಗಭೂಮಿ ನಿರಂತರವಾಗಿ, ಅಖಂಡವಾಗಿ ಯಾವ ಅಡೆ ತಡೆಯಿಲ್ಲದೆ ಬೆಳೆದು ಬಂದಿಲ್ಲ. ಕಲೆಯೆಂದರೆ ಆಗಾಗ ಬತ್ತಿ ಹೋಗುತ್ತದೆ, ಬರಗಾಲವೂ ಬರುತ್ತದೆ. ಆದರೆ, ಭೂಮಿಯ ಮೇಲೆ ಹೇಗೆ ಮಳೆಯು ಸುರಿದು ಬೆಳೆ ಬೆಳೆಯವುದೋ ಅದೇ ರೀತಿಯಲ್ಲಿ ರಂಗಭೂಮಿಯೂ ಚಿಗುರುತ್ತಲೇ ಬಂದಿದೆ. ರಂಗಭೂಮಿಗೆ ಸಾವಿಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.

ರಂಗ ಶಿಕ್ಷಣ ಕಡ್ಡಾಯವಾಗಲಿ: ಅಧಿಕಾರಕ್ಕೆ ಬರುವ ಎಲ್ಲ ಸರಕಾರಗಳು ಹಲವಾರು ಭರವಸೆಗಳನ್ನು ನೀಡುತ್ತಿವೆಯಾದರೂ ಅದನ್ನು ಈಡೇರಿಸಲು ಮುಂದಾಗುತ್ತಿಲ್ಲ ಎಂದ ಅವರು, ರಂಗಭೂಮಿಯನ್ನು ನಮ್ಮ ಶಿಕ್ಷಣದಲ್ಲಿಯೂ ಅಳವಡಿಸಬೇಕು. ಶಿಕ್ಷಣದಿಂದ ನಾಟಕ ರಚನೆ, ನಿರ್ದೇಶನ, ಹಾಡುಗಾರಿಕೆ, ಪ್ರದರ್ಶನ ಕಲೆಯಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ, ರಂಗ ಶಿಕ್ಷಣವನ್ನು ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಬೈರಮಂಗಲ ರಾಮೇಗೌಡ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ನಗರ ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಂ.ತಿಮ್ಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News