×
Ad

ರಾಜಕಾರಣಿಗಳು ಏಲಿಯನ್‌ಗಳಂತೆ ಹಾರಾಡುತ್ತಿದ್ದಾರೆ: ಪ್ರೊ.ಚಂಪಾ

Update: 2019-07-13 23:47 IST

ಬೆಂಗಳೂರು, ಜು.13: ಪ್ರಸ್ತುತ ರಾಜ್ಯ ರಾಜಕಾರಣ ಬದಲಾಗಿದ್ದು, ಜನಪ್ರತಿನಿಧಿಗಳು ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಏಲಿಯನ್‌ಗಳಂತೆ ಹಾರಾಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಹೇಳಿದ್ದಾರೆ.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪದ್ಮಭೂಷಣ ಡಾ.ರಾಜಕುಮಾರ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಜನರು ಮತ ಹಾಕಿ ಆಯ್ಕೆ ಮಾಡಿದ ಜನಪ್ರತಿನಿಧಿಗಳಿಂದ ಜನರನ್ನೇ ಮರೆತಿದ್ದಾರೆ. ರಾಜ್ಯದಲ್ಲಿ ಭೀರಕವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ, ತಮ್ಮ ಸ್ವಾರ್ಥಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ನಾವು ಆರಿಸಿ ಕಳಿಸಿದವರು ಇಂದು ಏಲಿಯನ್‌ಗಳಂತೆ ವಲಸೆ ಹೋಗಿದ್ದಾರೆ. ಇನ್ನು ಕೆಲವರು ನಾಪತ್ತೆಯಾದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ. ಇನ್ನೊಂದು ಕಡೆ ನೀರಿನ ಅಭಾವ ಅಧಿಕವಾಗಿದೆ. ಕನ್ನಡ ಚಳವಳಿಗೆ ಸಂಬಂಧಿಸಿದ ಅನೇಕ ಬೇಡಿಕೆಗಳು ಮೂಲೆಗುಂಪಾಗಿದೆ. ಇಂತಹ ಸಂದರ್ಭದಲ್ಲಿ ಜನರ ಬದುಕಿನ ಪ್ರಶ್ನೆಗಳಿಗೆ ಸ್ಪಂದಿಸುವ ಪರಿಪಾಠ ಬಿಟ್ಟು, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಪಾದಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹೋರಾಟಗಾರ ಮೂಲ ತವರುಮನೆ ಹಾಗೂ ತಾಯಿ ಬೇರು ಇದ್ದಂತೆ. ಈ ಸಂಘಟನೆಯಲ್ಲಿಯೇ, ಅನೇಕರು ಕನ್ನಡ ಪರ ಧ್ವನಿಗೂಡಿಸಿದರು ಎಂದ ಅವರು, ಯುವ ಜನಾಂಗ ಚಳುವಳಿ ಮುಂದುವರೆಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ, ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಶಂಕರ್ ಹೂಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಕೆ.ಪಿ.ಎನ್. ಚಂದ್ರಶೇಖರ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News