ಖೋಟಾ ನೋಟು ಜಾಲ ಭೇದಿಸಿದ ಸಿಸಿಬಿ: 33.70 ಲಕ್ಷ ಮೌಲ್ಯದ ಖೋಟಾ ನೋಟು ಜಪ್ತಿ

Update: 2019-07-13 18:21 GMT

ಬೆಂಗಳೂರು, ಜು.13: ಖೋಟಾ ನೋಟು ತಯಾರಿಸಿ ಚಲಾವಣೆ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯೋರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬರೋಬ್ಬರಿ 33.70 ಲಕ್ಷ ಮೌಲ್ಯದ ಖೋಟಾ ನೋಟು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಮರೋನ್ ದೇಶದ ಡಿಯೊಡೊನೆ ಕ್ರಿಸ್ಟೊಲ್(35) ಬಂಧಿತ ಆರೋಪಿ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ನಗರದ ಸುಬ್ಬಯ್ಯನಪಾಳ್ಯದ ಸಂಜೀವರೆಡ್ಡಿ ರಸ್ತೆಯ 2ನೆ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಭಾರತೀಯ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ಯಥಾವತ್ತಾಗಿ ನಕಲಿಯಾಗಿ ಜೆರಾಕ್ಸ್ ಮಾಡಿ ಅವುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದಾನೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಕ್ಯಾಮರೂನ್ ದೇಶದಿಂದ ಮೂರು ವರ್ಷಗಳ ಹಿಂದೆ ಪ್ರವಾಸ ವೀಸಾ ಮೂಲಕ ಬಂದು, ವೀಸಾವನ್ನು ನವೀಕರಣ ಮಾಡದೇ ಭಾರತದಲ್ಲಿ ನೆಲೆಸಿರುವುದು ಹಾಗೂ ಭಾರತ ದೇಶದಲ್ಲಿ ಚಲಾವಣೆಯಲ್ಲಿರುವ 2 ಸಾವಿರ ಮುಖಬೆಲೆಯ ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ನಕಲಿಯಾಗಿ ತಯಾರು ಮಾಡಿಕೊಂಡು, ಅವುಗಳನ್ನು ನೈಜವೆಂದು ನಂಬಿಸಿ, ಸಾರ್ವಜನಿಕವಾಗಿ ಚಲಾವಣೆ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾ ಜೀವನ ಮಾಡುತ್ತಿದ್ದದ್ದು ತನಿಖೆಯಲ್ಲಿ ಗೊತ್ತಾಗಿದೆ.

ಬಂಧಿತ ವಿದೇಶಿ ಪ್ರಜೆಯಿಂದ 33.70 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳು, ಕಲರ್ ಪ್ರಿಂಟರುಗಳು, ಮೊಬೈಲ್, ಪಾಸ್‌ಪೋರ್ಟ್ ವಶಕ್ಕೆ ಪಡೆಯಲಾಗಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News