ಎಂಟಿಬಿ ನಾಗರಾಜು ಮುಂಬೈಗೆ ಶಿಫ್ಟ್: ಕಾಂಗ್ರೆಸ್ ನಾಯಕರಿಗೆ ಶಾಕ್

Update: 2019-07-14 12:42 GMT

ಬೆಂಗಳೂರು, ಜು.14: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮನವೊಲಿಕೆಯಿಂದ ರಾಜೀನಾಮೆ ಹಿಂಪಡೆಯುವ ಭರವಸೆ ನೀಡಿದ್ದ ಶಾಸಕ ಎಂಟಿಬಿ ನಾಗರಾಜ್ ಇಂದು ಏಕಾಏಕಿ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದೆ.

ಶನಿವಾರ ಬೆಳಗ್ಗೆಯಿಂದ ಸಚಿವ ಡಿ.ಕೆ.ಶಿವಕುಮಾರ್ 5-6 ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ಮಾಡಿದರು. ಆ ಬಳಿಕ ನೇರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಕರೆತಂದು, ಅಲ್ಲಿಯ ಐದಾರು ಗಂಟೆಗಳ ಕಾಲ ಸಂದಾನ ಮಾಡುವ ಪ್ರಯತ್ನ ಮಾಡಲಾಯಿತು. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿಯೂ ಎಂಟಿಬಿ ಬಳಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

ಶನಿವಾರ ಸುಮಾರು 15 ಗಂಟೆಗಳ ಕಾಲ ವಿವಿಧ ಹಂತದಲ್ಲಿ ಎಂಟಿಬಿ ನಾಗರಾಜ್‌ರ ಮನವೊಲಿಕೆ ಮಾಡುವ ಪ್ರಯತ್ನಗಳು ನಡೆದವು. ಆ ಬಳಿಕ ತೀವ್ರ ಒತ್ತಡಕ್ಕೆ ಸಿಲುಕಿದ ಅವರು, ಮಧ್ಯರಾತ್ರಿ 11 ಗಂಟೆಯ ಸಮಯದಲ್ಲಿ ರಾಜೀನಾಮೆ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಅಲ್ಲದೆ, ಸುಧಾಕರ್‌ರನ್ನು ಮನವೊಲಿಸಿ ಕರೆ ತರಲಾಗುವುದು ಎಂದು ಘೋಷಿಸಿದ್ದರು.

ಆದರೆ, ರವಿವಾರ ಬೆಳಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದು ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದೆ. ಇನ್ನೊಂದು ಕಡೆ ಎಂಟಿಬಿ ರಾಜೀನಾಮೆ ಹಿಂಪಡೆಯುವ ವಿಚಾರದಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಕಾಂಗ್ರೆಸ್-ಜೆಡಿಎಸ್‌ನವರು ನಡೆಸಿದ ಸಂದಾನ ಪ್ರಯತ್ನಗಳು ಸಂಪೂರ್ಣ ವಿಫಲವಾಗಿದೆ.

ರವಿವಾರ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ವಿಶೇಷ ವಿಮಾನದ ಮೂಲಕ ಮುಂಬೈಗೆ ತಲುಪಿದ್ದಾರೆ. ರಾಜೀನಾಮೆ ನೀಡಿದ್ದ ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್ ಶನಿವಾರ ದಿಲ್ಲಿಗೆ ಹೋಗಿದ್ದರಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿರಲಿಲ್ಲ. ಎಂಟಿಬಿ ನಾಗರಾಜ್ ಜತೆ ಮಾತುಕತೆ ಬಳಿಕ ಉತ್ಸಾಹದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ನಾುಕರಿಗೆ ಇದೀಗ ತೀವ್ರ ಹಿನ್ನೆಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News