ವಿಧಾನ ಮಂಡಲ ಅಧಿವೇಶನದಲ್ಲಿ ‘ಅತೃಪ್ತರ ರಾಜೀನಾಮೆ' ಪ್ರತಿಧ್ವನಿ ಸಾಧ್ಯತೆ

Update: 2019-07-14 12:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 14: ಅತೃಪ್ತರ ಶಾಸಕರ ಮನವೊಲಿಕೆ ಪ್ರಯತ್ನಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ದಿಢೀರ್ ಬೆಳವಣಿಗೆಯೊಂದರಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಮೈತ್ರಿ ಮುಖಂಡರನ್ನು ತೀವ್ರ ಆತಂಕಕ್ಕೆ ಸಿಲುಕಿಸಿದೆ.

ಬಿಜೆಪಿಯ ಮುಖಂಡ ಆರ್.ಅಶೋಕ್ ಜತೆ ಸಚಿವ ಎಂಟಿಬಿ ನಾಗರಾಜ್ ಅವರು ಮುಂಬೈಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳಸಿದ್ದಾರೆ. ಏತನ್ಮಧ್ಯೆ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾರೆಡ್ಡಿ ಸೇರಿದಂತೆ ಇನ್ನೂ ನಾಲ್ಕೈದು ಮಂದಿ ಅತೃಪ್ತರು ನಾಳೆ (ಜು.15) ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

‘ರಾಜ್ಯದಲ್ಲಿನ ಮೈತ್ರಿ ಸರಕಾರ ಸುಭದ್ರವಾಗಿದ್ದು, ವಿಶ್ವಾಸಮತ ಗೆಲ್ಲುವ ಭರವಸೆ ಇದೆ’ ಎಂದು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಮುಖಂಡರು ಹೇಳುತ್ತಿದ್ದಾರೆ. ಸರಕಾರ ಉಳಿಸಿಕೊಳ್ಳುವ ದೃಷ್ಟಿಯಿಂದ ನಾಳೆ(ಜು.15) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.

ಈ ಮಧ್ಯೆ ನಾಳೆ ಮಧ್ಯಾಹ್ನ 12:30ಕ್ಕೆ ವಿಧಾನಸಭೆ ಕಲಾಪವೂ ಆರಂಭವಾಗಲಿದ್ದು, ಪ್ರಶ್ನೋತ್ತರ ಕಲಾಪ, ಕಾರ್ಯದರ್ಶಿ ವರದಿ ಮಂಡನೆ, ವಿತ್ತೀಯ ಬೇಡಿಕೆಗಳ ಮೇಲಿನ ಚರ್ಚೆ ಕಾರ್ಯಕಲಾಪ ಪಟ್ಟಿಯಲ್ಲಿದೆ. ಆದರೆ, ಅಧಿವೇಶನ ಕಲಾಪದಲ್ಲಿ ಯಾವ ಕ್ಷಣದಲ್ಲಿ ಏನು ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಆದರೆ, ‘ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಅಲ್ಲದೆ, ರೆಸಾರ್ಟ್ ವಾಸ್ತವ್ಯದಲ್ಲಿರುವ ಪಕ್ಷದ ಶಾಸಕರು ಸರಕಾರ ರಚನೆ ವಿಶ್ವಾಸದಲ್ಲಿ ಇದ್ದಾರೆ.

ಶಾಸಕರ ರಾಜೀನಾಮೆ ಪ್ರಹಸನ, ಮನವೊಲಿಕೆ ಕಸರತ್ತಿನ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಹಾವು-ಏಣಿ ಆಟದಂತೆ ಸಾಗುತ್ತಿದೆ. ಸರಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರು ಶ್ರಮಿಸುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಸರಕಾರ ಉರುಳಿಸಲು ಬಿಜೆಪಿ ಪ್ರಯತ್ನ ನಡೆಸಿರುವುದ ಗುಟ್ಟಿನ ಸಂಗತಿಯೇನಲ್ಲ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅತೃಪ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೈತ್ರಿ ಸರಕಾರ ಅಳಿವು-ಉಳಿವಿನ ಬಗ್ಗೆ ಮಂಗಳವಾರ ಹೊರ ಬೀಳಲಿರುವ ಕೋರ್ಟ್ ತೀರ್ಪು ಏನಾಗಲಿದೆ ಎಂಬುದು ಅಚ್ಚರಿ ಮೂಡಿಸಿದೆ. ಈ ಮಧ್ಯೆ ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮೈತ್ರಿ ಮುಖಂಡರು ಚರ್ಚೆ ನಡೆಸಿದ್ದಾರೆ. ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ಅತ್ತ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಮೈತ್ರಿ ಮುಖಂಡರಿಗೆ ಮತ್ತಷ್ಟು ತಲೆನೋವು ತಂದಿದೆ. ‘ರಾಜ್ಯದ ಜನತೆಗೆ ಮೈತ್ರಿ ಸರಕಾರದ ಮೇಲಿರುವ ಅತೃಪ್ತಿ, ಅಸಮಾಧಾನ ಪ್ರತಿನಿಧಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ’ ಎಂದು ಶಾಸಕ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯದಲ್ಲಿ ಈಗ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ನಾವು ಅತೃಪ್ತ ಶಾಸಕರಲ್ಲ. ಸರಕಾರದ ಮೇಲೆ ಜನತೆಗಿರುವ ಅಸಮಾಧಾನದ ಪ್ರತಿನಿಧಿಗಳಷ್ಟೇ. ಗೌಡರ ಕುಟುಂಬದವರು ಈಗಾಗಲೇ ಎಲ್ಲ ಅಧಿಕಾರವನ್ನು ಅನುಭವಿಸಿದ್ದಾರೆ’ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡರ ಕುಟುಂಬ ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಧಾನಿ ಹುದ್ದೆಯನ್ನೂ ನಿಭಾಯಿಸಿದೆ. ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಗೌಡರು ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News