ಸರಕಾರ ಅನುದಾನ ನೀಡುತ್ತಿಲ್ಲವೆಂದ ಅತೃಪ್ತ ಶಾಸಕರು: 5 ಸಾವಿರ ಕೋಟಿ ರೂ. ನೀಡಿದೆ ಎಂದ ಬಿಬಿಎಂಪಿ

Update: 2019-07-14 15:02 GMT

ಬೆಂಗಳೂರು, ಜು.14 : ಸರಕಾರ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿರುವ ಬೆಂಗಳೂರಿನ ನಾಲ್ಕು ಶಾಸಕರ ಕ್ಷೇತ್ರಗಳಿಗೆ ಬಿಬಿಎಂಪಿಯಿಂದ ಕಳೆದ 10 ವರ್ಷಗಳಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳಷ್ಟು ಅನುದಾನ ನೀಡಿರುವ ವಿಚಾರ ಹೊರಬಿದ್ದಿದೆ.

ನಮ್ಮ ಕ್ಷೇತ್ರ ಅಭಿವೃದ್ಧಿಗಾಗಿ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಆಡಳಿತ ಹಾಗೂ ಹಿಂದಿನ ಸರಕಾರದ ಅವಧಿಯಲ್ಲಿ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿವೆ ಕಳೆದ 10 ವರ್ಷಗಳ ಅವಧಿಯಲ್ಲಿ ಐದು ಸಾವಿರ ಕೋಟಿ ರೂ.ಗಳಷ್ಟು ಅನುದಾನ ಹಂಚಿಕೆ ಮಾಡಲಾಗಿದೆ.

ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಶಾಸಕರಿದ್ದ ಕ್ಷೇತ್ರಗಳಿಗೆ ಅನುದಾನ ಕಡಿಮೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುತ್ತದೆ. ಅದಕ್ಕೆ ತಕ್ಕಂತೆ ನಗರೋತ್ಥಾನ ಸೇರಿ ಇನ್ನಿತರೆ ಅನುದಾನಗಳನ್ನು ಮೈತ್ರಿ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿಗೆ ನೀಡಿ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಿದ್ದು, ಅನುದಾನ ಹಂಚಿಕೆ ಸಂಬಂಧ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಹಾಗೂ ದೋಸ್ತಿ ಸದಸ್ಯರ ನಡುವೆ ಗಲಾಟೆಗಳು ನಡೆದ ಅನೇಕ ಉದಾಹರಣೆಗಳಿವೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?: ಬಿಬಿಎಂಪಿ ನೀಡಿದ ಮಾಹಿತಿ ಅನ್ವಯ 2010ರ ಎಪ್ರಿಲ್‌ನಿಂದ 2019ರ ಮಾರ್ಚ್ ಅಂತ್ಯದವರೆಗೆ ನಾಲ್ಕು ಕ್ಷೇತ್ರಗಳಿಗೆ 5,016 ಕೋಟಿ ರೂ.ಗಳು ಅನುದಾನ ನೀಡಲಾಗಿದೆ. ಅದರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 1,214.60 ಕೋಟಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ 1,097.74 ಕೋಟಿ, ಯಶವಂತಪುರ ಕ್ಷೇತ್ರಕ್ಕೆ 1,403.55 ಕೋಟಿ ಹಾಗೂ ಕೆ.ಆರ್.ಪುರಂ ಕ್ಷೇತ್ರಕ್ಕೆ 1,301.05 ಕೋಟಿ ರೂ.ಗಳು ಹಂಚಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News