ರಾಷ್ಟ್ರಕವಿ ಬಿರುದು ಸಂಬಂಧ ಸರಕಾರ ನಿರ್ಣಯ ಕೈಗೊಳ್ಳಲಿ: ಡಾ.ಬರಗೂರು ರಾಮಚಂದ್ರಪ್ಪ

Update: 2019-07-14 16:29 GMT

ಬೆಂಗಳೂರು, ಜು.14: ಕನ್ನಡದ ಒಬ್ಬರಿಗೆ ‘ರಾಷ್ಟ್ರಕವಿ’ ಬಿರುದು ನೀಡುವ ಸಂಬಂಧ ರಾಜ್ಯ ಸರಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ನಗರದ ಬಿಎಂಶ್ರೀ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ ಮಂಥನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ರಾಷ್ಟ್ರಕವಿ ಬಿರುದು ನೀಡುವ ವಿಚಾರವಾಗಿ ಅನೇಕ ವರ್ಷಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಅದು ಅಂತಿಮ ನಿರ್ಧಾರವಾಗುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ ಈ ಸಂಬಂಧ ಒಂದು ನಿರ್ಧಾರ ಪ್ರಕಟಿಸಬೇಕೆಂದು ಹೇಳಿದರು.

ಕುವೆಂಪು ಸೇರಿದಂತೆ ಮೂರು ಜನರಿಗೆ ಕನ್ನಡದಲ್ಲಿ ರಾಷ್ಟ್ರಕವಿ ಬಿರುದು ಸಿಕ್ಕಿದೆ. ಆ ಬಳಿಕ ಅದೊಂದು ದೊಡ್ಡ ಚರ್ಚೆಯ ವಿಷಯವಾಗಿ ಉಳಿದುಬಿಟ್ಟಿದೆ. 2014 ರಲ್ಲಿ ಈ ಸಂಬಂಧ ರಾಜ್ಯ ಸರಕಾರ ಕೋ.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿಯನ್ನೂ ರಚನೆ ಮಾಡಲಾಗಿದ್ದು, ಅದು ವರದಿಯನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಆದರೆ, ಈ ಸಮಿತಿಯಲ್ಲಿದ್ದ ಸದಸ್ಯರಲ್ಲಿ ಬಹುತೇಕರು ಈ ಬಿರುದನ್ನು ವಿರೋಧಿಸುತ್ತಿದ್ದವರೇ ಆಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಬಿರುದು ಸಂಬಂಧ ರಚಿಸಿದ್ದ ಸಮಿತಿ ನೀಡಿರುವ ವರದಿಯೂ ಗೊಂದಲಗಳಿಂದ ಕೂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೇ ಈ ಸಂಬಂಧ ಒಂದು ನಿರ್ಣಯ ಕೈಗೊಳ್ಳಬೇಕು ಎಂದ ಅವರು, ಕುವೆಂಪು ಅವರ ಕವಿತೆಯನ್ನು 2004ರಲ್ಲಿ ಅಧಿಕೃತವಾಗಿ ನಾಡಗೀತೆ ಎಂದು ಘೋಷಿಸಲಾಯಿತು. ಬಳಿಕ ನಾಡಗೀತೆಯ ಅವಧಿ ಎಷ್ಟಿರಬೇಕು ಇತ್ಯಾದಿ ವಿಚಾರಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು 2006 ಮತ್ತು 2015ರಲ್ಲಿ ಸಮಿತಿ ರಚಿಸಲಾಗಿದೆ. ಇದುವರೆಗೂ ಒಂದು ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಅವರು ದೂರಿದರು.

ಕುವೆಂಪುಗೆ ವಿಮರ್ಶಾ ನ್ಯಾಯ ಸಿಗಲಿಲ್ಲ: ಕುವೆಂಪು ಆದ್ಯತೆಯ ಕವಿ. ಸಾಂಸ್ಕೃತಿಕ ರಾಜಕಾರಣದ ನಡುವೆ ಶಿಖರ ಪ್ರಾಯವಾದ ಪ್ರತಿಮಾಕೃತಿ ಕುವೆಂಪು. ಅವರು ಇಂದಿಗೂ ಎಂದೆಂದಿಗೂ ಸಲ್ಲುವ ಕವಿ. ಸಾಹಿತ್ಯ ಕೃತಿಗಳ ಮುಖಾಂತರ ಜೀವನಶಕ್ತಿಯಾಗಿದ್ದಾರೆ. ನವ್ಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಕುವೆಂಪು ಅವರ ಬಗ್ಗೆ ಟೀಕೆ, ವ್ಯಂಗ್ಯಗಳು ಕೇಳಿ ಬಂದವು. ಅವರನ್ನು ಮಹಾಕವಿ ಎಂದು ಒಪ್ಪುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಅವರ ಸಾಹಿತ್ಯಕ್ಕೆ ವಿಮರ್ಶೆ ನ್ಯಾಯ ಎಷ್ಟು ಸಿಗಬೇಕಿತ್ತೋ ಅಷ್ಟು ಸಿಗಲಿಲ್ಲ ಎಂದು ಹೇಳಿದರು.

ಕುವೆಂಪು ಯಾವುದೋ ಒಂದು ಜಾತಿ, ಧರ್ಮದ ವಿರುದ್ಧ ಬರೆಯಲಿಲ್ಲ. ಅವರು ಏಕಕಾಲಕ್ಕೆ ವಸಾಹತುಶಾಹಿ, ವರ್ಣ ವ್ಯವಸ್ಥೆಯ ವಿರೋಧಿಯಾಗಿದ್ದರು. ತಮ್ಮ ವೈಚಾರಿಕತೆ ಹಾಗೂ ಸಾಹಿತ್ಯ ಕೃತಿಗಳಲ್ಲಿ ಸಾಮಾಜಿಕ ಸಂರಚನೆಯ ಒಟ್ಟು ಸ್ವರೂಪವನ್ನು ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸುತ್ತಾ ಮಾನವೀಯ ಸಮಾಜ ಕಟ್ಟುವ ಬಗೆಯನ್ನು ತೋರಿಸಿದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ, ಅಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News