ಸರಕಾರಿ ಇಲಾಖೆಗಳ ಖಾಸಗೀಕರಣದಿಂದ ಅನಾನುಕೂಲ: ಜವರಾಯಿಗೌಡ

Update: 2019-07-14 16:49 GMT

ಬೆಂಗಳೂರು, ಜು.14: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ಇಲಾಖೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದರಿಂದ ಸಾಕಷ್ಟು ಅನಾನುಕೂಲವಾಗಲಿದೆ ಗ್ರೂಪ್ ಸಿ ಕರ್ನಾಟಕ ವಲಯದ ಅಧ್ಯಕ್ಷ ಜವರಾಯಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೇಲ್‌ನಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ ಆಯೋಜಿಸಿದ್ದ ಪೊಸ್ಟ್‌ಮೆನ್ ಮತ್ತು ಎಂಟಿಎಸ್ ಬೆಂಗಳೂರು ಪೂರ್ವ ವಿಭಾಗ ವಲಯದ 32ನೆ ದ್ವೈವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈಲ್ವೆ ಇಲಾಖೆಯಲ್ಲಿ ಈಗ ತೇಜಸ್ ಎಂಬ ಖಾಸಗಿ ರೈಲನ್ನು ಓಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ, ಸರಕಾರಿ ನೌಕರರಿಗೆ ತೊಂದರೆ ಆಗಲಿದೆ. ಹೀಗಾಗಿ, ಸರಕಾರಿ ವಲಯವನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.

ಕಾರ್ಮಿಕರ ಪರವಾಗಿ ಇರುವ ಕಾನೂನುಗಳನ್ನು ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ, ಬಂಡವಾಳ ಶಾಹಿಗಳು ಬಲಿಷ್ಠರಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು. 1968ರಲ್ಲಿ ನಡೆದ ಹೋರಾಟದಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದರು. ಇನ್ನು ಕೆಲವರು ಮೃತಪಟ್ಟರು. ಆದಾದ ಬಳಿಕ 1989ರಲ್ಲಿ ಮತ್ತೆ ಸಂಘಟನೆ ಕಟ್ಟಲಾಯಿತು. ಮುಷ್ಕರ ಅಂದರೆ ಭಯದ ವಾತಾವರಣ ಈಗ ಅಂಚೆ ಇಲಾಖೆಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

ಕರ್ನಾಟಕ ವಲಯ ಗ್ರೂಪ್ ಸಿ ಮಾಜಿ ವಲಯ ಕಾರ್ಯದರ್ಶಿ ಎಸ್.ಎಸ್.ಮಂಜುನಾಥ್ ಮಾತನಾಡಿ, ನೌಕರರು ಸಂಘಟನೆ ಸ್ಥಾಪನೆ ಹಿಂದಿರುವ ಉದ್ದೇಶವನ್ನು ಅರಿಯಬೇಕು. ತಳಮಟ್ಟದಲ್ಲಿ ಕಟ್ಟಲು ಶ್ರಮಿಸಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರಕಾರದ ಕಾರ್ಮಿಕ ನೀತಿಗಳ ವಿರುದ್ಧ ದನಿ ಎತ್ತಬೇಕು. ಸಂಘಟನೆ ಕ್ರಿಯಾಶೀಲವಾಗದಿದ್ದಲ್ಲಿ ನೌಕರರು ಸತ್ತಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 25 ರೂ.ಭಕ್ಷಿಸು ಪಡೆದವರನ್ನು ವಜಾ ಮಾಡಲಾಗುತ್ತಿದೆ. ಕೋಟಿಗಟ್ಟಲೆ ಹಣವನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ನುಂಗಿ ಹಾಕಲಾಗುತ್ತಿದೆ. ಮಾಡಬಾರದ ಅವ್ಯವಹಾರಗಳನ್ನು ಉನ್ನತ ಮಟ್ಟದ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಪೋಸ್ಟ್‌ಮನ್ ಮತ್ತು ಎಂಟಿಎಸ್ ಕರ್ನಾಟಕ ವಲಯದ ಅಧ್ಯಕ್ಷ ಬಿ.ವಿಜಯ ನಾಯರಿ, ಪಿ.ಮಲ್ಲಿಕಾರ್ಜುನ್, ಎಚ್.ಆರ್.ಈಶ್ವರಪ್ಪ, ಜಿ.ಜಾನಕಿರಾಂ, ಸೀತಲಕ್ಷ್ಮೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News