ದೇಶದಲ್ಲಿ ಶೇ.29 ರಷ್ಟು ಮಂದಿ ಹೃದಯಾಘಾತ ಸಾವು: ಡಾ.ಐ.ವಿಜಯಲಕ್ಷ್ಮೀ ಬಾಳೆಕುಂದ್ರಿ

Update: 2019-07-14 17:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.14: ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ 2015ರ ಪ್ರಕಾರ ದೇಶದಲ್ಲಿ ಹೃದಯ ಸಮಸ್ಯೆ ಹೆಚ್ಚಿದ್ದು, ಶೇ.29ರಷ್ಟು ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಹೃದ್ರೋಗ ತಜ್ಞೆ ಡಾ.ಐ.ವಿಜಯಲಕ್ಷ್ಮೀ ಬಾಳೆಕುಂದ್ರಿ ತಿಳಿಸಿದ್ದಾರೆ.

ರವಿವಾರ ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಿದ್ದ ಕೆ.ಟಿ.ಅಪ್ಪಣ್ಣ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯಕರ ಹೃದಯ ಮತ್ತು ಹೃದಯವಂತಿಕೆಗೆ ಆಹಾರ ಪದ್ಧತಿಯ ಮಹತ್ವ ಕುರಿತು ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ.29ರಷ್ಟು ಜನರು ಹೃದಯಾಘಾತದಿಂದ ಮೃತಪಡುತ್ತಿದ್ದು, 40 ವರ್ಷದಿಂದ ಹೃದ್ರೋಗ ಸಮಸ್ಯೆ 4 ಪಟ್ಟು ಹೆಚ್ಚಾಗಿದೆ. ಪಟ್ಟಣದಲ್ಲಿ ಶೇ. 60, ಹಳ್ಳಿಗಳಲ್ಲಿ ಶೇ. 54ರಷ್ಟು ಜನರು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಯುವಜನತೆ ಮನೆಯ ಊಟಕ್ಕಿಂತ ಹೊರಗಿನ ಊಟ ಮತ್ತು ಜಂಕ್ ಫುಡ್‌ನ್ನು ಹೆಚ್ಚಾಗಿ ತಿನ್ನುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 1 ಸಿಗರೇಟ್ ಸೇದುವುದರಿಂದ 6 ದಿನ ಆಯಸ್ಸು ಕಡಿಮೆಯಾಗಲಿದ್ದು, ತಂಪು ಪಾನೀಯದಿಂದ ಹಲ್ಲುಗಳು ಸವೆಯುತ್ತವೆ. ತರಕಾರಿ ಮತ್ತು ಹಣ್ಣುಗಳಲ್ಲಿ ನ್ಯೂಟ್ರಿಷನ್, ವಿಟಮಿನ್ಸ್ ಇದ್ದು, ಇವುಗಳನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರಲಿದೆ ಎಂದು ಮಾಹಿತಿ ನೀಡಿದರು.

ಪ್ರತಿವರ್ಷ ನೀರಿನಿಂದ ಉಂಟಾಗುವ ಕಾಯಿಲೆಗಳಿಗೆ ಕೇಂದ್ರ ಸರ್ಕಾರ 19,995 ಕೋಟಿ ರೂ. ಖರ್ಚು ಮಾಡುತ್ತಿದ್ದು, ಇದನ್ನರಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಹಳ್ಳಿಯಲ್ಲಿಯೂ ಸ್ಥಳೀಯ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜನೌಷಧಿ ಮತ್ತು ಸ್ಟಂಟ್‌ಗಳ ಬೆಲೆ ಇಳಿಕೆಯಿಂದ ಜನರಿಗೆ ಹಲವು ಸೌಲಭ್ಯ ಕೈಗೆಟುಗುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ. ವಸಂತಕುಮಾರ್, ತುಮಕೂರು ವಿವಿ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News